ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಲು ಪಕ್ಷಗಳು ತಾಮುಂದು ನಾಮುಂದು ಎಂಬಂತೆ ತುದಿಗಾಲಲ್ಲಿ ನಿಂತಿದ್ದು, ಮನಮೋಹನ್ ಸಿಂಗ್ ನೂತನ ಸರ್ಕಾರಕ್ಕೆ ಬೆಂಬಲ ಸೂಚಿಸುವ ಪತ್ರಗಳು ರಾಷ್ಟ್ರಪತಿಗಳಿಗೆ ಹರಿದುಬರುತ್ತಿದೆ. ಸಮಾಜವಾದಿ ಪಕ್ಷ, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್, ಸಿಕ್ಕಿಂ ಡೆಮಾಕ್ರೆಟಿಕ್ ಫ್ರಂಟ್ ಪಕ್ಷಗಳು ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಗೆ ತಮ್ಮ ಬೆಂಬಲ ಪತ್ರ ಸಲ್ಲಿಸಿದ್ದಾರೆ.
ಚುನಾವಣೆ ಕಾಲಕ್ಕೆ ಕಾಂಗ್ರೆಸ್‌ನಿಂದ ದೂರಸರಿದಿದ್ದವರೆಲ್ಲ ಇದೀಗ ಯುಪಿಎಗೆ ಬೇಷರತ್ ಬೆಂಬಲ ನೀಡಲು ಮುಗಿಬೀಳುತ್ತಿದ್ದಾರೆ. ಇದೀಗ ಯುಪಿಎ ಸಂಖ್ಯೆಯು 316ರಷ್ಟಾಗಿದೆ. ಕಾಂಗ್ರೆಸ್‌ಗೆ ಸರಳ ಬಹುಮತದಾಟಲು ಬೇಕಿರು ಸಂಖ್ಯೆ 272. ಯುಪಿಎ 261 ಸ್ಥಾನಗಳನ್ನು ತಾನಾಗಿ ಗೆದ್ದುಕೊಂಡಿದೆ.
ಉತ್ತರ ಪ್ರದೇಶದಲ್ಲಿ ನಾಯಿಬೆಕ್ಕುಗಳಂತೆ ಪರಸ್ಪರ ಕಚ್ಚಾಡುತ್ತಿರುವ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷಳು ಕೋಮುವಾದಿಗಳನ್ನು ದೂರವಿಡಲು ಜಾತ್ಯತೀತ ಪಕ್ಷಗಳನ್ನು ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಯುಪಿಎಗೆ ಬೆಂಬಲ ನೀಡಲು ಮುಂದಾಗಿವೆ. ಎಸ್ಪಿ ಬಳಿ 23 ಹಾಗೂ ಬಿಎಸ್ಪಿ ಬಳಿ 21 ಸ್ಥಾನಗಳಿವೆ.
ಈ ಎರಡು ಪಕ್ಷಗಳಲ್ಲದೆ, ನಾಲ್ಕು ಸಂಸದರ ಬಲದ ಆರ್‌ಜೆಡಿ, ಮೂರು ಸಂಸದರನ್ನು ಹೊಂದಿರುವ ಜೆಡಿಎಸ್ ಹಾಗೂ ಕೆಲವು ಸ್ವತಂತ್ರ ಅಭ್ಯರ್ಥಿಗಳು ಯುಪಿಎಗೆ ಬೆಂಬಲ ನೀಡಲು ಮುಂದಾಗಿವೆ. ಜಾರ್ಖಂಡ್ ವಿಕಾಸ್ ಮೋರ್ಚಾದ ಏಕೈಕ ಸದಸ್ಯ ಬಾಬುಲಾಲ್ ಮರಾಂಡಿ ಅವರೂ ಯುಪಿಎಗೆ ಬೆಂಬಲ ಸೂಚಿಸಿದ್ದಾರೆ.
ಇದಲ್ಲದೆ, ಸ್ವತಂತ್ರ ಅಭ್ಯರ್ಥಿಗಳಾಗಿರುವ ಲಡಕ್ ಕ್ಷೇತ್ರದಿಂದ ಗೆದ್ದಿರುವ ಗುಲಾಂ ಹಸನ್ ಖಾನ್, ಮಹಾರಾಷ್ಟ್ರದ ಸ್ವತಂತ್ರ ಅಭ್ಯರ್ಥಿ ಸದಾಶಿವ್ ರಾಮ್ ಮಂಡಲಿಕ್, ಹಾಗೂ ಬೋಡೋದ ಏಕೈಕ ಅಭ್ಯರ್ಥಿ ಸಾನ್ಸುಮ ಖುಂಗುರ್ ಬಿವಿಸ್ಮುತಾಯಿರಿ ಅವರೂ ಸಹ ಯುಪಿಎಗೆ ಬೆಂಬಲ ಘೋಷಿಸಿದ್ದಾರೆ.
ಆದರೆ ಕಾಂಗ್ರೆಸ್ ಯಾರನ್ನೆಲ್ಲ ಹತ್ತಿರ ಸೇರಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. |