ನಿಮ್ಮ ದಾಂಪತ್ಯ ಜೀವನ ಸುಖವಾಗಿರಬೇಕಾದರೆ ನಿಮ್ಮ ಪತ್ನಿಯ ಮಾತನ್ನು ಚಾಚೂ ತಪ್ಪದೆ ಕೇಳಿಬಿಡಿ ಎಂಬುದಾಗಿ ಸುಪ್ರೀಂ ಕೋರ್ಟ್ ಮಂಗಳವಾರ ಪತಿಯರಿಗೆ ಸಲಹೆ ನೀಡಿದೆ.ನ್ಯಾಯಮೂರ್ತಿಗಳಾದ ಮಾರ್ಕಾಂಡೇಯ ಕಟ್ಜು ಮತ್ತು ದೀಪಕ್ ವರ್ಮ ಅವರುಗಳನ್ನೊಳಗೊಂಡ ನ್ಯಾಯಪೀಠವು ಹೇಳಿದ ಬುದ್ಧಿ ಮಾತಿದು. ನಿಮ್ಮ ಹೆಂಡತಿ ಹೇಳಿದಂತೆ ಕೇಳದೆ ಇದ್ದರೆ ನೀವು 'ಗಂಡಾಂತರ'ಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದೂ ಅದು ಸಲಹೆ ನೀಡಿದೆ." ನಿಮ್ಮ ಪತ್ನಿ ನೀಡುವ ಸಲಹೆ ವಿವೇಚನಾಯುಕ್ತವೋ ಇಲ್ಲವೋ, ಅದನ್ನು ಪತಿ ಒಪ್ಪಿಕೊಳ್ಳಬೇಕು. ನಿಮ್ಮ ಪತ್ನಿ ನಿಮಗೆ ಮುಖವನ್ನು ಅತ್ತ ತಿರುಗಿಸಲು ಹೇಳಿದರೆ ಅತ್ತ ತಿರುಗಿಸಿ. ಇತ್ತ ತಿರುಗಿಸಲು ಹೇಳಿದರೆ, ಸಮ್ಮನೆ ಇತ್ತ ತಿರುಗಿಸಿ, ಹೆಚ್ಚು ಮತಾಡದಿರಿ" ಎಂಬುದಾಗಿ ನ್ಯಾಯಮೂರ್ತಿಗಳು ಹೇಳಿದರು.ವಿಮಾನ ಪಡೆಯ ಅಧಿಕಾರಿ ದೀಪಕ್ ಕುಮಾರ್ ಅವರು ತಮ್ಮನ್ನು ತ್ಯಜಿಸಿ ಹೋಗಿರುವ ಪತ್ನಿ ಮನಿಷಾರಿಂದ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆಗೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ನಾವೆಲ್ಲರೂ ಈ ಸ್ಥಿತಿ ಅನುಭವಿಸುತ್ತಿದ್ದೇವೆ ಎಂಬುದಾಗಿ ಲಘುದಾಟಿಯಲ್ಲಿ ಹೇಳಿ ನ್ಯಾಯಾಲಯದಲ್ಲಿ ನಗುವಿನ ಅಲೆ ಎಬ್ಬಿಸಿದರು. " ದೀಪಕ್ ಅವರು 17 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿಯಿಂದ ತೀವ್ರ ತೊಂದರೆ ಅನುಭವಿಸಿದ್ದಾರೆ. ಪತಿಯ ವಿರುದ್ಧ ಆಕೆ ಹಲವಾರು ಸುಳ್ಳು ಅಪರಾಧ ಮೊಕದ್ದಮೆಗಳನ್ನು ಹೂಡಿ ಸತಾಯಿಸುತ್ತಿದ್ದಾರೆ. ಕೆಳ ಹಂತದ ನ್ಯಾಯಾಲಯ ವಿಚ್ಛೇದನ ನೀಡುವಂತೆ ತೀರ್ಪು ನೀಡಿದರೂ ಆಕೆ ವಿಚ್ಛೇದನ ನೀಡುತ್ತಿಲ್ಲ" ಎಂದು ದೀಪಕ್ ಪರ ವಕೀಲರು ವಾದಿಸಿದರು.ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಮುಂದಿನ ಜುಲೈಗೆ ದೂಡಿದೆ. |