ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಹಾಗೂ ಎಲ್‌ಟಿಟಿಇಯ ರಹಸ್ಯ ಕಚೇರಿಯ ಮುಖ್ಯಸ್ಥ ಪೊಟ್ಟು ಅಮ್ಮನ್ ಸಾವಿನ ಮಾಹಿತಿ ಅಧಿಕೃತಗೊಂಡರೆ, ಭಾರತದ ಮಾಜಿ ಪ್ರಧಾನಿ ರಾಜೀವ್ ಹತ್ಯೆಯ ಕರಾಳ ಅಧ್ಯಾಯವೂ ಅಂತ್ಯಗೊಳ್ಳಲಿದೆ.ರಾಜೀವ್ ಹತ್ಯೆಯ ಆರೋಪ ಹೊತ್ತಿರುವ ಪ್ರಭಾಕರನ್ ಹಾಗೂ ಪೊಟ್ಟು ಅಮ್ಮನ್ ಅವರಿಬ್ಬರೇ ಈವರೆಗೆ ಬದುಕಿದ್ದುದರಿಂದ ರಾಜೀವ್ ಹತ್ಯೆಯ ಪ್ರಕರಣ ನ್ಯಾಯಲಯದಲ್ಲಿ ಜೀವಂತವಾಗಿತ್ತು. ಈ ಇಬ್ಬರ ಮರಣ ದೃಢಪಟ್ಟ ಮಾಹಿತಿ ಶ್ರೀಲಂಕಾದಿಂದ ಸಿಬಿಐಗೆ ತಲುಪಿದರೆ, ರಾಜೀವ್ ಹತ್ಯೆ ಕೇಸು ವಜಾಗೊಳ್ಳಲಿದೆ.ಸಿಬಿಐ ವಕ್ತಾರರು ಹೇಳುವಂತೆ, ನಾವು ಕೊಲಂಬೋ ಎಂಬಸಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಲ್ಲಿಂದ ದೃಢವಾದ ಅಧಿಕೃತ ಮಾಹಿತಿಗಳನ್ನು ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.ಪ್ರಭಾಕರನ್ ಹಾಗೂ ಪೊಟ್ಟು ಅಮನ್ ಎಂಬಿಬ್ಬರು ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಬೇಕಾದ ಆರೋಪಿಗಳು. ಎಲ್‌ಟಟಿಇಯ ಮಹಿಳಾ ವಿಭಾಗದ ಅಖಿಲ ಎಂಬಾಕೆಯೂ ರಾಜೀವ್ ಹತ್ಯೆಯ ಮೂರನೇ ಆರೋಪಿ. ಆದರೆ, 1995ರಲ್ಲಿ ಶ್ರೀಲಂಕಾ ಸೇನೆಯಿಂದ ಆಕೆ ಹತಳಾದ ಮೇಲೆ ಆಕೆಯ ಮೇಲಿದ್ದ ಆರೋಪವನ್ನು ವಜಾಗೊಳಿಸಲಾಗಿತ್ತು.1991 ರ ಮೇ 21ರಂದು ಎಲ್‌ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಹತ್ಯೆಗೀಡಾಗಿದ್ದರು. ಸಿಬಿಐ ಈ ಹಿನ್ನೆಲೆಯಲ್ಲಿ 13 ಮಂದಿ ಶ್ರೀಲಂಕಾ ನಾಗರಿಕರು ಸೇರಿದಂತೆ 26 ಮಂದಿಯನ್ನು ಬಂಧಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಭಾಕರನ್ ಹಾಗೂ ಪೊಟ್ಟು ಅಮನ್ ಮೇಲೆ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸಲಾಗಿತ್ತು.ಪ್ರಭಾಕರನ್ ಸಾವಿನ ಬಗ್ಗೆ ಅಧಿಕೃತ ಮಾಹಿತಿಗಳು ಲಭ್ಯವಾದರೆ, ರಾಜೀವ್ ಹತ್ಯೆಯ ಕರಾಳ ಅಧ್ಯಾಯ ಇಲ್ಲಿಗೆ ಮುಕ್ತಾಯವಾದಂತಾಗುತ್ತದೆ ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಸಿಬಿಐ ನ್ಯಾಯಾಲಯದಲ್ಲಿ ರಾಜೀವ್ ಹತ್ಯೆಯ ಆರೋಪಿಗಳ ಮೇಲಿರುವ ಕೇಸನ್ನು ವಜಾಗೊಳಿಸಲು ಕೋರುವ ಸಂಭವವಿದೆ. ರಾಜೀವ್ ಹತ್ಯೆಯಿಂದಾಗಿ ಭಾರತದ ಒಳಗೂ ಸಿಬಿಐ ಜಾಲದ ಬಗ್ಗೆ ಮೊದಲು ಬಹಿರಂಗಗೊಳಿಸಿದ ಏಕಮಾತ್ರ ಸಂಸ್ಥೆಯಾಗಿ ಸಿಬಿಐ ಹೊರಹೊಮ್ಮಿತು. ಹಾಗೂ ಎಲ್‌ಟಿಟಿಇ ಕಾರ್ಯಾಚರಣೆಯ ಬಗ್ಗೆ ವಿಸ್ತೃತ ಚಾರ್ಜ್‌ಶೀಟ್‌ನ್ನು ಸಲ್ಲಿಸಿತ್ತು. |