ಶ್ರೀಲಂಕಾ ಸೇನೆಯು ಎಲ್ಟಿಟಿಇ ಹುಟ್ಟಡಗಿಸಿರುವುದು ಮತ್ತು ಮತ್ತು ಉಗ್ರಾಮಿ ಸಂಘಟನೆಯ ಮುಖ್ಯಸ್ಥ ವಿ. ಪ್ರಭಾಕರನ್ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಭಾರತವು ತನ್ನ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರನ್ನು ಬುಧವಾರ ದ್ವೀಪರಾಷ್ಟ್ರಕ್ಕೆ ಕಳುಹಿಸಿದೆ.ಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಅವರು ಎಲ್ಟಿಟಿಇಯೊಂದಿಗಿನ ಹೋರಾಟ ಅಂತ್ಯಗೊಂಡಿದೆ ಎಂಬುದಾಗಿ ಔಪಚಾರಿಕವಾಗಿ ಘೋಷಿಸಿರುವ ಒಂದು ದಿನದ ಬಳಿಕ, ನಾರಾಯಣನ್ ಹಾಗೂ ಮೆನನ್ ಅವರು ಶ್ರೀಲಂಕಾದಲ್ಲಿನ ಪರಿಸ್ಥಿತಿಯ ಪರಿವೀಕ್ಷಣೆಗೆ ತೆರಳಿದ್ದಾರೆ.ಶ್ರೀಲಂಕಾದಲ್ಲಿರುವ ತಮಿಳಿರ ಪರಿಸ್ಥಿತಿಯ ಕುರಿತು ತೀವ್ರ ಕಳವಳ ಹೊಂದಿರುವ ಭಾರತವು ಅವರಿಗೆ ಪುನರ್ವಸತಿ ಒದಗಿಸುವ ಅಗತ್ಯದ ಕುರಿತು ಒತ್ತಾಯಿಸುತ್ತಲೇ ಬಂದಿದೆ.ತಮಿಳುನಾಡಿಗೆ ಹೊರಡುವ ಮುಂಚಿತವಾಗಿ ನಾರಾಯಣನ್ ಅವರು, ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಶ್ರೀಲಂಕಾದಲ್ಲಿನ ಬೆಳವಣಿಗೆಗಳನ್ನು ವಿವರಿಸಿದರು.ಶ್ರೀಲಂಕಾದಲ್ಲಿರುವ ತಮಿಳರ ಕುರಿತ ಕಾಳಜಿಯೇ ಭಾರತದ ಪ್ರಥಮ ಕಳವಳವಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ್ ತಿಳಿಸಿದರು. |