ಖಾತೆ ಹಂಚಿಕೆ ಕುರಿತು ಮಿತ್ರ ಪಕ್ಷಗಳ ನಡುವಿನ ಮಾತುಕತೆ ಅಂತಿಮವಾಗದಿರುವ ಕಾರಣ ಪ್ರಧಾನಿ ಮನಮೋಹನ್ ಸಿಂಗ್ ಅವರು, ತನ್ನೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ಮಂತ್ರಿಗಳ ಪಟ್ಟಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲು ನಿಗದಿಯಾಗಿದ್ದ ಸಭೆಯನ್ನು ಗುರುವಾರ ಮುಂಜಾನೆ ಮುಂದೂಡಲಾಗಿದೆ.ಪ್ರಧಾನಿ ಅವರು ರಾಷ್ಟ್ರಪತಿಗಳನ್ನು ಭೇಟಿಯಾಗಿ ವಿವಿಧ ಖಾತೆಗಳನ್ನು ಹೊಂದಲಿರುವ ಸಚಿವರ ಹೆಸರು ಮತ್ತು ಖಾತೆಯ ಪಟ್ಟಿಯನ್ನು ಸಲ್ಲಿಸಬೇಕು. ಆದರೆ ಮಿತ್ರಪಕ್ಷಗಳು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿರುವ ಕಾರಣ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್‌ಗಳು ಲಾಲೂ ಅವರಿಂದ ತೆರವಾಗಿರುವ ರೈಲ್ವೇ ಖಾತೆಗೆ ಪಟ್ಟು ಹಿಡಿದಿವೆ ಎನ್ನಲಾಗಿದೆ. ಇದಲ್ಲದೆ ಡಿಎಂಕೆ ತನಗೆ 8 ಸ್ಥಾನಗಳು ಬೇಕೆಂದು ಕೇಳುತ್ತಿದೆ. ಆದರೆ ಅಷ್ಟು ಸಚಿವ ಸಚಿವ ಸ್ಥಾನಗಳನ್ನು ನೀಡಲು ಕಾಂಗ್ರೆಸ್ ಸಿದ್ಧವಿಲ್ಲವೆನ್ನಲಾಗಿದೆ. ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರ ನಡುವಿನ ಪ್ರಥಮ ಸುತ್ತಿನ ಮಾತುಕತೆ ಬುಧವಾರ ಅಂತಿಮಗೊಂಡಿರಲಿಲ್ಲ. ಗುರುವಾರ ಈ ಮತ್ತೆ ನಾಯಕರು ಮಾತುಕತೆಗೆ ಕುಳಿತಿದ್ದಾರೆ. |