ನೂತನ ಸರ್ಕಾರದ ನೇಮಕಕ್ಕೆ ಕೆಲವೇ ಗಂಟೆಗಳು ಬಾಕಿಯುಳಿದಿದ್ದು, ಯಾರ್ಯಾರು ಯಾವ್ಯಾವ ಖಾತೆ ಪಡೆಯಲಿದ್ದಾರೆ ಎಂಬ ಉಹಾಪೋಹಗಳು ಗರಿಗೆದರಿದ್ದು, ಈ ಸರ್ತಿ ಕರ್ನಾಟಕ ಕನಿಷ್ಠ ಮೂರು ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಲಾಗುತ್ತಿದೆ.ನೂತನ ಸಂಪುಟದಲ್ಲಿ ಸಂಭಾವ್ಯರ ವಿವರ ಇಂತಿದೆ. ಪಿ. ಚಿದಂಬರಂ ಗೃಹಸಚಿವ, ಪ್ರಣಬ್ ಮುಖರ್ಜಿ ವಿತ್ತ, ಕಮಲ್ ನಾಥ್ ವಾಣಿಜ್ಯ ಹಾಗೂ ಕಪಿಲ್ ಸಿಬಾಲ್ ಅಥವಾ ಎಸ್ಸೆಂ ಕೃಷ್ಣ ವಿದೇಶಾಂಗ ವ್ಯವಹಾರಗಳ ಖಾತೆಯನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಇದೇವೇಳೆ ಸ್ಪೀಕರ್ ಸ್ಥಾನಕ್ಕೆ ಸುಶೀಲ್ ಕುಮಾರ್ ಶಿಂಧೆ, ವಿ. ಕಿಶೋರ್ ಚಂದ್ರ ದೇವ್ ಹಾಗೂ ಕರ್ನಾಟಕದ ವೀರಪ್ಪ ಮೊಯ್ಲಿ ಅವರ ಹೆಸರುಗಳು ಸ್ಪೀಕರ್ ಸ್ಥಾನಕ್ಕೆ ಕೇಳಿ ಬರುತ್ತಿದೆ.ಇದಲ್ಲದೆ ಮಲ್ಲಿಕಾರ್ಜುನ ಖರ್ಗೆ, ಮಾಣಿಕ್ ಠಾಗೋರ್(ತಮಿಳ್ನಾಡು) ಇವರ ಹೆಸರುಗಳೂ ಪಟ್ಟಿಯಲ್ಲಿದೆ ಎನ್ನಲಾಗಿದೆ. ಇವರೊಂದಿಗೆ ಮಾಜಿ ಸಚಿವರಾದ ಸಲ್ಮಾನ್ ಖುರ್ಷೀದ್, ಸಲೀಂ ಶೇರ್ವಾನಿ ಮತ್ತು ಬೆನಿ ಪ್ರಸಾದ್ ವರ್ಮಾ (ಎಲ್ಲಾ ಉತ್ತರಪ್ರದೇಶದವರು) ಅವರುಗಳು ಈ ಬಾರಿಯು ಖಾತೆ ಗಿಟ್ಟಿಸಬಹುದೆಂದು ಹೇಳಲಾಗಿದೆ.ಇದರೊಂದಿಗೆ ಯುವಪಡೆಯಿಂದ ಮಿಲಿಂದ್ ದೇವ್ರಾ, ಸಚಿನ್ ಪೈಲಟ್, ನವೀನ್ ಜಿಂದಾಲ್, ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತು ಜತಿನ್ ಪ್ರಸಾದ್ ಅವರ ಹೆಸರುಗಳಿವೆ. ಎನ್‌ಸಿಪಿಯ ಶರದ್ ಪವಾರ್ ಹಾಗೂ ಪ್ರಫುಲ್ ಪಟೇಲ್ ಅವರುಗಳು ತಮ್ಮ ಈಗಿರುವ ಖಾತೆಗಳಾದ ಕೃಷಿ ಹಾಗೂ ನಾಗರಿಕ ವಾಯುವಾನ ಖಾತೆಗಳನ್ನೇ ಮುಂದುವರಿಸುವ ಸಾಧ್ಯತೆ ಇದೆ. ಯುಪಿಎಯ ಪ್ರಮುಖ ಮಿತ್ರಪಕ್ಷವಾಗಿರುವ ಡಿಎಂಕೆ ಒಂಬತ್ತು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಈ ಮಧ್ಯೆ ಡಿಎಂಕೆಗಿಂತ ಒಂದು ಹೆಚ್ಚು ಸ್ಥಾನ ತನಗೆ ಬೇಕೆಂದು ತೃಣಮೂಲ ಕಾಂಗ್ರೆಸ್ ಕೇಳುತ್ತಿದೆ. ಡಿಎಂಕೆ 18 ಸ್ಥಾನಗಳನ್ನು ಹೊಂದಿದ್ದರೆ, ತೃಣಮೂಲ ಕಾಂಗ್ರೆಸ್ 19 ಸ್ಥಾನಗಳನ್ನು ಹೊಂದಿದೆ.ಡಿಎಂಕೆಯು ಆರೋಗ್ಯ ಟೆಲಿಕಾಂ, ಇಂಧನ, ಭೂ ಸಾರಿಗೆ ಹಾಗೂ ರೈಲ್ವೇ ಖಾತೆಗಳ ಮೇಲೆ ಕಣ್ಣಿರಿಸಿದೆ. ತನ್ನ ಪುತ್ರ ಅಳಗಿರಿ, ಪುತ್ರಿ ಕನಿಮೋಳ್, ಸೋದರಳಿಯ ದಯಾನಿಧಿ ಮಾರನ್, ಎ. ರಾಜ ಹಾಗೂ ಹೊಸದಾಗಿ ಸಂಸತ್ತು ಪ್ರವೇಶಿಸುತ್ತಿರುವ ಟಿ.ಕೆ. ಇಳಂಗೋವನ್, ಹೆಲೆನ್ ಡೇವಿಡ್ಸನ್ ಮತ್ತು ತೃತೀಯ ಬಾರಿಗೆ ಸಂಸದರಾಗಿರುವ ಜಗತ್ರಕ್ಷಣ್ ಅವರುಗಳು ಸಚಿವರಾಗಬೇಕು ಎಂಬುದು ಡಿಎಂಕೆ ಮುಖ್ಯಸ್ಥ ಕುರಣಾನಿಧಿ ಇಚ್ಚೆ.ಅಳಗಿರಿಗೆ ರೈಲ್ವೇ ಖಾತೆ ಬೇಕೆಂದು ಡಿಎಂಕೆ ಕೇಳುತ್ತಿದೆ. ಆದರೆ, ಆ ಖಾತೆಯು ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿಯವರಿಗೊಲಿಯುವ ಸಾಧ್ಯತೆ ಹೆಚ್ಚಿದೆ. ತೃಣಮೂಲ ಕಾಂಗ್ರೆಸ್ ಗಣಿ, ಕಲ್ಲಿದ್ದಲು, ಉಕ್ಕು ಮತ್ತು ವಾಯುಯಾನ ಖಾತೆಯ ಮೇಲೆ ಕಣ್ಣಿರಿಸಿದೆ.ಈ ಮಧ್ಯೆ ಕಾಂಗ್ರೆಸ್‌ನ ಒಂದು ವರ್ಗದ ಒತ್ತಾಯದ ಹಿನ್ನೆಲೆಯಲ್ಲಿ ರೈಲ್ವೇ ಖಾತೆ ಮತ್ತೆ ಲಾಲೂ ಅವರಿಗೆ ಸಿಕ್ಕಿದರೂ ಸಿಕ್ಕಬಹುದು ಎಂದೂ ಹೇಳಲಾಗುತ್ತಿದೆ. |