ಇತ್ತೀಚೆಗೆ ಅಂತ್ಯಗೊಂಡ ಚುನಾವಣೆಯಲ್ಲಿ ಭಾರೀ ವಿಜಯ ಸಾಧಿಸಿರುವ ಬಿಜು ಜನತಾದಳದ ವರಿಷ್ಠ ನವೀನ್ ಪಟ್ನಾಯಕ್ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಗುರುವಾರ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 11.30ರ ವೇಳೆಗೆ ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿ ಗೌಪ್ಯತಾ ಮತ್ತು ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ಯಪಾಲ ಎಂಸಿ ಭಂಡಾರೆ ಅವರು ಮುಖ್ಯಮಂತ್ರಿ ಹಾಗೂ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.ವಿಧಾನಸಭೆಯ 147 ಸ್ಥಾನಗಳಲ್ಲಿ 103 ಸ್ಥಾನಗಳನ್ನು ಗೆದ್ದಿರುವ ಬಿಜೆಡಿ ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿದೆ. ಪಟ್ನಾಯಕ್ ಅವರೊಂದಿಗೆ 20 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದು ಇವರಲ್ಲಿ 11 ಮಂದಿ ಸಂಪುಟದರ್ಜೆಯವರಾದರೆ, ಮಿಕ್ಕವರು ರಾಜ್ಯಖಾತೆ ವಹಿಸಿದ್ದಾರೆ. ನೂತನ ಸಂಪುಟದಲ್ಲಿ ಹತ್ತು ಹೊಸಮುಖಗಳಿಗೆ ಆದ್ಯತೆ ನೀಡಲಾಗಿದೆ. |