ಇತ್ತೀಚೆಗೆ ಕೊನೆಗೊಂಡಿರುವ ಮಹಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಹೊಡೆತ ತಿಂದಿರುವುದು ಮತ್ತು ಪಕ್ಷದ ತಾರಾ ಪ್ರಚಾರಕ ನರೇಂದ್ರ ಮೋದಿಯವರಿಗೆ ಮುಖವಿಲ್ಲದಂತಾಗಿರುವ ಹಿನ್ನೆಲೆಯಲ್ಲಿ ಗುಜರಾತಿನಲ್ಲಿ ಚಿಗಿತುಗೊಂಡಿರುವ ಮೋದಿ ವಿರೋಧಿಗಳು 'ಮೋದಿ ವಿರೋಧಿ ಚಳುವಳಿ'ಯನ್ನು ಮತ್ತೆ ಆರಂಭಿಸಿದ್ದಾರೆ ಎಂದು ಹೇಳಲಾಗಿದೆ. ಐದು ವರ್ಷಗಳ ಹಿಂದೆ ಈ ಚಳುವಳಿ ಚಾಲ್ತಿಯಲ್ಲಿತ್ತಾದರೂ, ಬಳಿಕ ಮೋದಿ ವರ್ಚಸ್ಸಿನ ಎದುರು ಎಲ್ಲವೂ ಸಪ್ಪೆಯಾಗಿತ್ತು.ಇಬ್ಬರು ಮಾಜಿ ಸಚಿವರಾದ ಕಾಶಿರಾಮ್ ರಾಣಾ ಮತ್ತು ವಲ್ಲಭ್ ಕತಾರಿಯಾ ಸೇರಿದಂತೆ ಕೆಲವು ಪ್ರಮುಖ ಬಿಜೆಪಿಯ ಬಂಡಾಯ ನಾಯಕರು ಒಂದಾಗಿದ್ದು, ಗುಜರಾತಿನಲ್ಲಿ ಮೋದಿಯವರ ಸರ್ವಾಧಿಕಾರಿ ಶೈಲಿಯ ಕಾರ್ಯನಿರ್ವಹಣೆ ಕುರಿತು ಹೈಕಮಾಂಡಿಗೆ ದೂರು ನೀಡಲು ಯೋಜಿಸುತ್ತಿದ್ದಾರೆ. "ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್ ಸೇರಿದಂತೆ ಹಿರಿಯ ನಾಯಕರ ಭೇಟಿಗೆ ಅಪಾಯಿಂಟ್‌ಮೆಂಟ್ ಪಡೆದಿದ್ದೇನೆ" ಎಂದು ಹೇಳಿರುವ ಕತಾರಿಯಾ ದೆಹಲಿಯಿಂದ ಮರಳಿದ ಸಮಾನ ಮನಸ್ಕರೊಂದಿಗೆ ಗುಜರಾತಿನಲ್ಲಿ ಪಕ್ಷದ ಕಾರ್ಯಕ್ಷಮತೆ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.ಚುನಾವಣೆಯಲ್ಲಿ ಬಿಜೆಪಿಯು ಅರ್ಧ ಡಜನ್‌ಗಿಂತಲೂ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿದೆ. ಇದಕ್ಕೆ ಮೋದಿ ಅವರು ತಪ್ಪು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ಕಾರಣ. ಇದಲ್ಲದೆ, ಕಾಂಗ್ರೆಸ್‌ನಿಂದ ಸಿಡಿದು ಬಂದ ಅಭ್ಯರ್ಥಿಗಳಿಗೆ ಕೆಲವು ಕಡೆಗಳಲ್ಲಿ ಟಿಕೆಟ್ ನೀಡಲಾಗಿದ್ದು, ಅಂತಹವರೂ ಸಹ ಸೋತಿದ್ದಾರೆ ಎಂದು ಕತಾರಿಯಾ ದೂರುತ್ತಾರೆ. ಕತಾರಿಯಾ ಅವರಿಗೆ ಈ ಸರ್ತಿ ರಾಜ್‌ಕೋಟ್ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಗಿತ್ತು. ಮೋದಿ ಅವರು ಗುಜರಾತಿನ 26 ಸ್ಥಾನಗಳಲ್ಲಿ 20ರಿಂದ 22 ಸ್ಥಾನಗಳ ಭರವಸೆ ನೀಡಿದ್ದರು. ಆದರೆ ಬಿಜೆಪಿ ಬರಿಯ ಒಂದು ಸ್ಥಾನವನ್ನು ಮಾತ್ರ ಹೆಚ್ಚುವರಿಯಾಗಿ ಗಳಿಸಿದೆ. ಇದಕ್ಕೆ ಹೈ ಕಮಾಂಡ್ ಮೋದಿ ಅವರಿಂದ ವಿಚಾರಣೆ ಕೋರಬೇಕು ಎಂದು ಕತಾರಿಯಾ ಒತ್ತಾಯಿಸುತ್ತಾರೆ.ಕೇಸರಿ ಕೋಟೆ ಎಂದೇ ಖ್ಯಾತವಾಗಿರುವ ಸೌರಾಷ್ಟ್ರಪದಲ್ಲಿ ಹೆಚ್ಚಿನ ಸಂಖ್ಯೆಯ ಆರೆಸ್ಸೆಸ್ ಶಾಖೆಗಳಿವೆ. ಆದರೂ ಇಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಸೋತಿದೆ ಇದಕ್ಕೆ ಮೋದಿ ಅವರ ತಪ್ಪು ಆಯ್ಕೆ ಕಾರಣ ಎಂದೂ ಅವರು ದೂರುತ್ತಾರೆ.ಮೋದಿವಿರುದ್ಧ ಅಸಮಾಧ ಹೊಂದಿರುವ ಇತರ ಕಾರ್ಯಕರ್ತರನ್ನೂ ಒಟ್ಟು ಸೇರಿಸುವುದಾಗಿ ಕತಾರಿಯಾ ಹೇಳುತ್ತಾರೆ. |