ಅಂಗಪಕ್ಷಗಳ ನಡುವೆ ಸಚಿವ ಖಾತೆ ಹಂಚಿಕೆ ಮಾತುಕತೆಗಳನ್ನು ಅಂತಿಮಗೊಳಿಸುವ ಸರ್ಕಸ್ ಮುಂದುವರಿದೇ ಇದ್ದರೂ, ಡಾ| ಮನಮೋಹನ್ ಸಿಂಗ್ ಅವರು ದ್ವಿತೀಯ ಬಾರಿಗೆ ಪ್ರಧಾನಿಯಾಗಿ ಶುಕ್ರವಾರ ಸಂಜೆ 5.30ರ ವೇಳೆ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.ಪ್ರಧಾನಿ ಹಾಗೂ ಅವರ ನೂತನ ಮಂತ್ರಿಮಂಡಲದ ಗೌಪ್ಯತಾ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಸಮಾರಂಭವು ರಾಷ್ಟ್ರಪತಿ ಭವನದಲ್ಲಿ ಜರುಗಲಿದೆ. 76 ರ ಹರೆಯದ ಮನಮೋಹನ್ ಸಿಂಗ್ ಹಾಗೂ ಅವರ ಮಂತ್ರಿ ಗಢಣಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಮಾಣ ವಚನ ಬೋಧಿಸಲಿದ್ದಾರೆ.ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಮಂತ್ರಿಮಂಡಲದ ಪಟ್ಟಿಯನ್ನು ರಾಷ್ಟ್ರಪತಿಯವರಿಗೆ ಗುರುವಾರ ಮುಂಜಾನೆ ಸಲ್ಲಿಸಬೇಕಿತ್ತು. ಆದರೆ ಮಿತ್ರಪಕ್ಷಗಳೊಂದಿಗೆ ಖಾತೆ ಹಂಚಿಕೆ ಮಾತುಕತೆ ಅಂತ್ಯಗೊಂಡಿಲ್ಲದ ಕಾರಣ ಪ್ರಧಾನಿಯವರ ರಾಷ್ಟ್ರಪತಿಯವರೊಂದಿಗಿನ ಭೇಟಿಯನ್ನು ಮುಂದೂಡಲಾಗಿದೆ. |