ನೂತನ ಸರ್ಕಾರ ರಚನೆಗೂ ಮುನ್ನ ಅಪಸ್ವರ ತಲೆದೋರಿದ್ದು, ಸಂಪುಟ ಖಾತೆಗಾಗಿ ಖ್ಯಾತೆ ತೆಗೆದಿರುವ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸಂಧಾನ ಮಾತುಕತೆ ವಿಫಲವಾಗಿರುವ ಹಿನ್ನೆಲೆಯಲ್ಲಿ, ಯುಪಿಎಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಗುರುವಾರ ಘೋಷಿಸಿದೆ.ಯುಪಿಎ ಸರ್ಕಾರ ರಚನೆಗೂ ಮುನ್ನ ಏಳು ಸಂಪುಟ ದರ್ಜೆಯ ಖಾತೆ ನೀಡಬೇಕೆಂದು ಡಿಎಂಕೆ ಪಟ್ಟು ಹಿಡಿದಿತ್ತು. ಆ ನಿಟ್ಟಿನಲ್ಲಿ ಪ್ರಣಬ್ ಮುಖರ್ಜಿ, ಅಹಮದ್ ಪಟೇಲ್, ಡಾ.ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಸಂಧಾನ ಮಾತುಕತೆ ನಡೆಸಿದರೂ ಕೂಡ, ಕಾಂಗ್ರೆಸ್ ರಾಜಿ ಸೂತ್ರದಿಂದ ಸಮಾಧಾನಗೊಳ್ಳದ ಡಿಎಂಕೆ ಇದೀಗ ಯುಪಿಎನಿಂದ ಹೊರಗುಳಿಯಲು ನಿರ್ಧರಿಸಿದೆ. ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಫಾರ್ಮುಲಾವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಡಿಎಂಕೆ ಮುಖಂಡ ಟಿ.ಆರ್.ಬಾಲು ಸುಮಾರು 3ತಾಸುಗಳ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಡಿಎಂಕೆ ವರಿಷ್ಠ ಎಂ.ಕರುಣಾನಿಧಿಯವರು ನಡೆದ ಮಾತುಕತೆಯಲ್ಲಿ ಕಾಂಗ್ರೆಸ್ ಬೇಡಿಕೆ ತಿರಸ್ಕರಿಲ್ಪಟ್ಟಿರುವ ಹಿನ್ನೆಲೆಯಲ್ಲಿ ಸಂಧಾನ ಮಾತುಕತೆ ವಿಫಲವಾದಂತಾಗಿದೆ ಎಂದಿರುವ ಅವರು, ಕೇಂದ್ರ ಸರ್ಕಾರಕ್ಕೆ ಡಿಎಂಕೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಹೇಳಿದೆ.ಮೂರು ಕ್ಯಾಬಿನೆಟ್ ಸೇರಿದಂತೆ ಡಿಎಂಕೆ ಒಟ್ಟು ಏಳು ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿತ್ತು. ಆದರೆ ಕಾಂಗ್ರೆಸ್ ಆರು ಸಚಿವ ಸ್ಥಾನ ನೀಡುವುದಾಗಿ ಹೇಳಿದೆ. ಹೆಚ್ಚಿನ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಡಿಎಂಕೆ ಏಳು ಸ್ಥಾನ ಬೇಕು ಎಂದು ಪಟ್ಟು ಹಿಡಿದ ಪರಿಣಾಮ ಸಂಧಾನ ಮಾತುಕತೆ ವಿಫಲವಾಗಿದ್ದು, ನೂತನ ಸರ್ಕಾರ ರಚನೆಗೂ ಮುನ್ನ ಅಪಸ್ವರ ತಲೆದೋರಿದಂತಾಗಿದೆ. |