ಖಾತೆಗಾಗಿ ಪಟ್ಟು ಹಿಡಿದಿರುವ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆ ಅಂತಿಮಗೊಳ್ಳದ ಕಾರಣ ಅಸಮಾಧಾನ ಗೊಂಡಿರುವ ಡಿಎಂಕೆ ವರಿಷ್ಠ ಕರುಣಾನಿಧಿ ಶುಕ್ರವಾರ ಮುಂಜಾನೆ ತಮಿಳ್ನಾಡಿಗೆ ಮರಳಿದ್ದಾರೆ. ಅಲ್ಲದೆ ಶುಕ್ರವಾರ ಸಾಯಂಕಾಲ ನಡೆಯಲಿರುವ ಪ್ರಮಾಣವಚನ ಸ್ವೀಕರ ಸಮಾರಂಭವನ್ನು ಬಹಿಷ್ಕರಿಸಲು ಡಿಎಂಕೆ ನಿರ್ಧರಿಸಿದೆ. ತಮಗೆ ಬೇಕಾದಷ್ಟು ಖಾತೆಗಳು ಸಿಗದ ಕಾರಣ ಕ್ಯಾತೆ ತೆಗೆದಿರುವ ಡಿಎಂಕೆ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದೆ. ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ಡಿಎಂಕೆ ಮೂರು ಸಂಪುಟ ದರ್ಜೆಖಾತೆ ಬಯಸುತ್ತಿದೆ. ಇದಕ್ಕೆ ಕಾಂಗ್ರೆಸ್ ಒಪ್ಪಿದ್ದು, ತೃತೀಯ ಖಾತೆಯಾಗಿ ಕಾರ್ಮಿಕ, ಜವಳಿ ಹಾಗೂ ಭಾರಿ ಉದ್ಯಮ ಹಾಗೂ ಸಣ್ಣ ಕೈಗಾರಿಕೆಗಳ ಖಾತೆಗಳಲ್ಲಿ ಒಂದನ್ನು ಆಯ್ದುಕೊಳ್ಳಲು ಹೇಳಿದೆ. ಆದರೆ, ಇದು ಡಿಎಂಕೆಗೆ ಹಿತವಿಲ್ಲ.ಗುರುವಾರ ಹಲವು ಸುತ್ತುಗಳ ಮಾತುಕತೆಯ ಬಳಿಕ ಕಾಂಗ್ರೆಸ್ ಮುಂದಿಟ್ಟಿರುವ ಸೂತ್ರವು ಸ್ವೀಕಾರಾರ್ಹವಲ್ಲ ಎಂಬುದಾಗಿ ಹೇಳಿರುವ ಡಿಎಂಕೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿದೆ. ಕಾಂಗ್ರೆಸ್ ನೀಡಿದ ಸೂತ್ರ ಸ್ವೀಕಾರಾರ್ಹವಲ್ಲ. ಇದಕ್ಕೆ ತಾನು ವೈಯಕ್ತಿವಾಗಿ ಏನೂ ಹೇಳುವಂತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ ಕರುಣಾನಿಧಿ, ಡಿಎಂಕೆ ಕಾರ್ಯಕಾರಿಣಿಯು ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಂಡ ಬಳಿಕವಷ್ಟೆ ಪಕ್ಷ ಏನಾದರೂ ಹೇಳಬಹುದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಸಂಧಾನ ವಿಫಲ-ಯುಪಿಎಗೆ ಡಿಎಂಕೆ ಬಾಹ್ಯ ಬೆಂಬಲ |