' ಸಂಪುಟದಲ್ಲಿ ಸ್ಥಾನ ಕುರಿತು ಕಾಂಗ್ರೆಸ್‌ನ ಸೂತ್ರವನ್ನು ನನ್ನ ನಾಯಕ (ಎಂ.ಕರುಣಾನಿಧಿ) ತಿರಸ್ಕರಿಸಿದ್ದು, ಡಿಎಂಕೆಯು ಯುಪಿಎಗೆ ಹೊರಗಿನ ಬೆಂಬಲ ನೀಡುತ್ತದೆ ಅಂತ ನಿಮಗೆ ಹೇಳುವಂತೆ ಸೂಚಿಸಿದ್ದಾರೆ' ಎಂದು ಡಿಎಂಕೆ ಮಾಜಿ ಸಚಿವ ಟಿ.ಆರ್.ಬಾಲು ಘೋಷಿಸಿರುವುದರೊಂದಿಗೆ, 2004ರಲ್ಲಿಯೂ ಇದೇ ರೀತಿ ನಾಟಕ ಆಡಿದ್ದ ಡಿಎಂಕೆಯ ಆಟ ಈ ಬಾರಿ ನಡೆದಿಲ್ಲ ಎಂಬುದು ಸ್ಪಷ್ಟವಾಯಿತು.ಈ ಬಾರಿ 18 ಸಂಸದರಿದ್ದಾರೆ. ಆದರೆ ಕಳೆದ ಬಾರಿ ಇದಕ್ಕಿಂತ ಕಡಿಮೆ (16) ಸಂಸದರನ್ನಿಟ್ಟುಕೊಂಡಿದ್ದ ಡಿಎಂಕೆ ಇದೇ ಮಾದರಿಯ ಬ್ಲ್ಯಾಕ್‌ಮೇಲ್ ಆಟ ಆಡಿತ್ತು. ಆಗ ಒಂದು ಸ್ವಲ್ಪ ಬದಲಾವಣೆಯಿತ್ತು. ಈ ರೀತಿ ಬಂಡಾಯದ ಧ್ವನಿ ಎತ್ತುವ ಮೊದಲೇ ಅದು ಸಿಕ್ಕಿದ್ದು ಲಾಭ ಎಂದು ಯುಪಿಎ ಸರಕಾರದೊಳಗೆ ತೂರಿಕೊಂಡಿತ್ತು.ಕಳೆದ ಬಾರಿ ಕಾಂಗ್ರೆಸ್ ಕೂಡ ತೀರಾ ಕಡಿಮೆ ಸ್ಥಾನಗಳಿಂದಾಗಿ ಅಂಗ ಪಕ್ಷಗಳ ಬೆದರಿಕೆ ತಂತ್ರಗಳಿಗೆ ಮಣಿಯಬೇಕಾದ ಪರಿಸ್ಥಿತಿ ಇತ್ತು. ಆದರೆ ಈ ಬಾರಿ ಅದಕ್ಕೆ 206 ಸಂಸದರ ಸ್ವಂತ ಬಲವಿದೆ ಮತ್ತು ಡಿಎಂಕೆ ಹೊರತಾಗಿ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ 304 ಸದಸ್ಯರ ಬೆಂಬಲವೂ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ನ ಕೈಹಿಡಿದೆಳೆಯುವುದು ಡಿಎಂಕೆಗೆ ಅಷ್ಟು ಸುಲಭವಲ್ಲ. ಅದು ವಯೋವೃದ್ಧ ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿಗೆ ಅರ್ಥವೂ ಆಗುತ್ತಿಲ್ಲ.7 ಡಿಎಂಕೆ ಸಂಸದರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮೊದಲ ಯುಪಿಎ ಸರಕಾರ ಪ್ರಮಾಣವಚನ ಸ್ವೀಕರಿಸಿದ ಮರುದಿನ ಅಂದರೆ 2004ರ ಮೇ 23ರಂದು, ಡಿಎಂಕೆಗೆ ಮತ್ತಷ್ಟು ಸಚಿವ ಸ್ಥಾನ ದೊರೆಯುವವರೆಗೂ ನಿಮ್ಮ ನಿಮ್ಮ ಸಚಿವಾಲಯಗಳಿಗೆ ಕಾಲಿಡಬೇಡಿ ಎಂದು ಇದೇ ಕರುಣಾನಿಧಿ ಸೂಚಿಸಿದ್ದರು. ಮಾತ್ರವಲ್ಲ, ಕಾಂಗ್ರೆಸ್ ಪಕ್ಷವು ಬೆನ್ನಿಗೆ ಚೂರಿ ಹಾಕಿದೆ ಎಂದೂ ಅವರು ದೂರಿದ್ದರು. 'ಎಂಟು ದಿನಗಳ ಮಾತುಕತೆಯ ಸಂದರ್ಭ ಬಂದಿದ್ದ ಒಪ್ಪಂದಕ್ಕೆ ಕಾಂಗ್ರೆಸ್ ಬದ್ಧವಾಗಲಿಲ್ಲ, ಇದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಸುತ್ತ ಮುತ್ತಲಿರುವ 'ಚಮಚಾಗಳ ಪಡೆ'ಯೇ ಕಾರಣ' ಎಂದೂ ದೂರಿದ್ದರು.ಅಂದು ಡಿಎಂಕೆಯ ಗುರಿ ಎಂದರೆ ಮತ್ತಷ್ಟು ಖಾತೆಗಳನ್ನು ತೆಗೆದುಕೊಂಡು ತಮಿಳುನಾಡಿನಲ್ಲಿ ತನ್ನ ಬದ್ಧ ಎದುರಾಳಿ, ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾರನ್ನು ಮಟ್ಟ ಹಾಕುವುದು. ಅಂದರೆ, ವಾಣಿಜ್ಯ ಖಾತೆ ರಾಜ್ಯ ಸಚಿವ, ಡಿಎಂಕೆಯ ಪಳನಿಮಣಿಕ್ಕಂ ಅಡಿಯಲ್ಲಿ ಕಂದಾಯ ಇಲಾಖೆಯನ್ನೂ ತರಬೇಕು, ಈ ಮೂಲಕ ಜಯಲಲಿತಾ ಮತ್ತಾಕೆಯ ಗೆಳತಿ ಶಶಿಕಲಾ ವಿರುದ್ಧದ ಆದಾಯ ತೆರಿಗೆ ಕೇಸುಗಳನ್ನು ತ್ವರಿತಗೊಳಿಸಲು, ಪಳನಿಮಣಿಕ್ಕಂಗೆ ಅಧಿಕಾರ ಇರಬೇಕು ಎಂಬುದು ಡಿಎಂಕೆ ತಂತ್ರವಾಗಿತ್ತು. ಇದಲ್ಲದೆ, ಭೂಸಾರಿಗೆ ಸಚಿವ ಟಿ.ಆರ್.ಬಾಲು ಅವರಿಗೆ ಹಡಗು ಮತ್ತು ಹೆದ್ದಾರಿ ಖಾತೆಯನ್ನೂ ನೀಡಬೇಕು, ಪಳನಿಮಣಿಕ್ಕಂರನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ವಿತ್ತ ಇಲಾಖೆಗೆ ವರ್ಗಾಯಿಸಬೇಕು ಎಂಬುದು ಅದರ ಆಗ್ರಹವಾಗಿತ್ತು. ಪರಿಣಾಮ? ಕಾಂಗ್ರೆಸ್ ಗಪ್ ಚುಪ್ಪೆನ್ನದೆ ಒಪ್ಪಿಕೊಂಡುಬಿಟ್ಟಿತು.ತತ್ಪರಿಣಾಮವಾಗಿ, ಟಿಆರ್ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಹಡಗು ಖಾತೆಯನ್ನು ಬಿಟ್ಟುಕೊಡಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಕರುಣಾನಿಧಿ ಮತ್ತು ಅವರ ಸೋದರ ಸಂಬಂಧಿ ದಯಾನಿಧಿ ಮಾರನ್ ಮಧ್ಯೆ ಸಾಕಷ್ಟು ಸುತ್ತಿನ ಟೆಲಿಫೋನ್ ಮಾತುಕತೆಗಳು ನಡೆದಿದ್ದವು.ಅಂದು ಕಾಂಗ್ರೆಸ್ ಸಂಖ್ಯಾಬಲವಿಲ್ಲದೆ ಸಂಕಷ್ಟದಲ್ಲಿತ್ತು ಎಂದು ಅರಿವಿದ್ದ ಡಿಎಂಕೆ, ಮೇ 15ರಂದೇ, 'ಸರಕಾರ ಸೇರಬೇಕೇ ಬೇಡವೇ ಎಂಬ ಬಗ್ಗೆ ಕಾದು, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಹೇಳಿತ್ತು. ಈ ಬಾರಿ ಕಾಂಗ್ರೆಸ್ ಬಲ ಹೆಚ್ಚಿದೆ. ಹೀಗಾಗಿ, ಫಲಿತಾಂಶ ಘೋಷಣೆಯಾದ ತಕ್ಷಣವೇ ಸರಕಾರ ಸೇರುವ ಇರಾದೆ ಹೊರಗೆಡಹಿತ್ತು. ಇದೀಗ ಖಾತೆಗಾಗಿ ಕ್ಯಾತೆ. |