ಡಿಎಂಕೆಯ ಕ್ಯಾತೆಯಿಂದಾಗಿ ಖಾತೆ ಹಂಚಿಕೆ ವಿಚಾರಕ್ಕೆ ಹಿನ್ನಡೆಯುಂಟಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮನಮೋಹನ್ ಸಿಂಗ್‌ರೊಂದಿಗೆ ಕೇವಲ ಸಂಪುಟ ದರ್ಜೆ ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ವರದಿಗಳು ಹೇಳಿವೆ. ಒಟ್ಟು 19 ಸಚಿವರು ಪ್ರಧಾನಿಯವರೊಂದಿಗೆ ರಾಷ್ಟ್ರಪತಿ ಅವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.ಹಿರಿಯ ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ, ಎನ್‌ಸಿಪಿ ನಾಯಕ ಶರದ್ ಪವಾರ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಎ.ಕೆ. ಆಂಟನಿ, ಪಿ. ಚಿದಂಬರಂ, ಎಸ್ಸೆಂ ಕೃಷ್ಣ, ಗುಲಾಂ ನಬಿ ಅಜಾದ್, ವೀರಪ್ಪ ಮೊಯ್ಲಿ ಅವರುಗಳು ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.ಇವರಲ್ಲದೆ, ಸುಶಿಲ್ ಕುಮಾರ್ ಶಿಂಧೆ, ಎಸ್. ಜೈಪಾಲ್ ರೆಡ್ಡಿ, ಕಮಲ್ ನಾಥ್, ವಯಲಾರ್ ರವಿ, ಮೀರಾ ಕುಮಾರ್, ಮುರಳಿ ದಿಯೋರಾ, ಕಪಿಲ್ ಸಿಬಾಲ್, ಅಂಬಿಕಾ ಸೋನಿ, ಬಿ.ಕೆ. ಹಂದಿಕ್, ಆನಂದ್ ಶರ್ಮಾ, ಹಾಗೂ ಸಿ.ಪಿ ಜೋಷಿ ಅವರುಗಳು ಮಂತ್ರಿಗಳ ಪಟ್ಟಿಯಲ್ಲಿದ್ದಾರೆ ಎಂದು ಪ್ರಧಾನಿಯವರ ಮಾಧ್ಯಮ ಸಲಹೆಗಾರ ದೀಪಕ್ ಸಂಧು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಮುಂದಿನ ಕೆಲವೇ ದಿನಗಳಲ್ಲಿ ಮಂತ್ರಿಮಂಡಲವನ್ನು ವಿಸ್ತರಿಸಿ ಮತ್ತಷ್ಟು ಸಂಪುಟ ದರ್ಜೆ ಸಚಿವರು ಹಾಗೂ ಸ್ವತಂತ್ರ ಖಾತೆಯ ರಾಜ್ಯ ಸಚಿವರು ಹಾಗೂ ರಾಜ್ಯ ಸಚಿವರನ್ನು ನೇಮಿಸಲಾಗುವುದು ಎಂದು ಅವರು ತಿಳಿಸಿದರು.ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ತನ್ನ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವರ ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಭೇಟಿಯಾಗಿ ಖಾತೆ ಹಂಚಿಕೆ ಕುರಿತು ಮಾತುಕತೆ ನಡೆಸಿ ತಾತ್ಕಾಲಿಕ ಪಟ್ಟಿಯನ್ನು ಅಂತಿಮ ಗೊಳಿಸಿದ್ದರು.ಸಂಭಾವ್ಯವರ ಪಟ್ಟಿಯಲ್ಲಿ ಕರ್ನಾಟಕದ ಎಸ್ಸೆಂ ಕೃಷ್ಣ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಸಚಿವ ಮುನಿಯಪ್ಪ ಅವರ ಹೆಸರುಗಳು ಕೇಳಿಬಂದಿತ್ತು. ಅಂತಿಮವಾಗಿ ಎಸ್ಸೆಂ ಕೃಷ್ಣ ಹಾಗೂ ವೀರಪ್ಪ ಮೊಯ್ಲಿ ಅವರಿಗೆ ಅದೃಷ್ಟ ಕುಲಾಯಿಸಿದೆ.ಫಾರೂಕ್ ಅಬ್ದುಲ್ಲಾ ಈ ಮಧ್ಯೆ ಸಚಿವ ಖಾತೆ ಸಿಗದ ಕಾರಣ ಮುನಿಸಿಕೊಂಡಿರುವ ಫಾರೂಕ್ ಅಬ್ದುಲ್ಲಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಲೊಳ್ಳುತ್ತಿಲ್ಲ. ಅವರು ಐಪಿಎಲ್ ವೀಕ್ಷಣೆಗಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ. ಆದರೆ, ಅವರ ಪುತ್ರ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ತಮ್ಮ ಪಕ್ಷಕ್ಕೆ ಅಸಮಾಧಾನವಿಲ್ಲ ಎಂದು ಹೇಳಿದ್ದು, ಮುಂದಿನ ಸಂಪುಟ ವಿಸ್ತರಣೆಯಲ್ಲಿ ತನ್ನ ತಂದೆ ಸ್ಥಾನ ಪಡೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. |