ಸತತ ಎರಡನೇ ಅವಧಿಗೆ ಮನಮೋಹನ್ ಸಿಂಗ್ ಅವರು ಶುಕ್ರವಾರ ಸಾಯಂಕಾಲ ಯುಪಿಎ ಸರಕಾರದ ಪ್ರಧಾನ ಮಂತ್ರಿಯಾಗಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಕರ್ನಾಟಕದಿಂದ ಎಸ್.ಎಂ.ಕೃಷ್ಣ, ಎಂ.ವೀರಪ್ಪ ಮೊಯ್ಲಿ ಹಾಗೂ ಪ್ರಣಬ್ ಮುಖರ್ಜಿ, ವೀರಪ್ಪ ಮೊಯ್ಲಿ, ಶರದ್ ಪವಾರ್ ಸಹಿತ 19 ಮಂದಿ ಪ್ರಮಾಣ ವಚನ ಸ್ವೀಕರಿಸಿದರು.
6 ಮಂದಿ ಮಾಜಿ ಮುಖ್ಯಮಂತ್ರಿಗಳು: ಸಂಪುಟ ಸೇರಿದವರಲ್ಲಿ ಆರು ಮಂದಿ ಮಾಜಿ ಮುಖ್ಯಮಂತ್ರಿಗಳು ಇದ್ದುದು ಇಂದಿನ ಕಾರ್ಯಕ್ರಮದ ವಿಶೇಷ. ಅವರೆಂದರೆ ಕರ್ನಾಟಕದ ಎಸ್.ಎಂ.ಕೃಷ್ಣ ಮತ್ತು ವೀರಪ್ಪ ಮೊಯ್ಲಿ, ಮಹಾರಾಷ್ಟ್ರದ ಶರದ್ ಪವಾರ್ ಮತ್ತು ಸುಶೀಲ್ ಕುಮಾರ್ ಶಿಂಧೆ, ಜಮ್ಮು ಮತ್ತು ಕಾಶ್ಮೀರದ ಗುಲಾಂ ನಬಿ ಆಜಾದ್ ಹಾಗೂ ಕೇರಳದ ಎ.ಕೆ.ಆಂಟನಿ.
ಮಂಗಳವಾರ ವಿಸ್ತರಣೆ: ಯುಪಿಎ ಸರಕಾರದ ಪ್ರಥಮ ಸಂಪುಟ ವಿಸ್ತರಣೆ ಕಾರ್ಯಕ್ರಮ ಮಂಗಳವಾರ ನಡೆಯಲಿದ್ದು, ಅಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರೂ ಸಂಪುಟ ಸೇರುವ ನಿರೀಕ್ಷೆಗಳಿವೆ.
ಮಾಜಿ ಸಚಿವರಾದ ವಿಲಾಸ್ ಮುತಮ್ವಾರ್ ಮತ್ತು ಮುಕುಲ್ ವಾಸ್ನಿಕ್ ಸಹಿತ ಡಜನ್ ಮಂದಿ ಸಂಪುಟ ಸೇರಲಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡುತ್ತಾ, ಕೊನೆಗೂ ಮಾತುಕತೆಯ ಸಂದರ್ಭ ಸಂಧಾನ ಮಾಡಿಕೊಂಡ ಡಿಎಂಕೆ ಸಚಿವರು ಕೂಡ ಅದೇ ದಿನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶುಕ್ರವಾರ ಯುಪಿಎ-2 ಸಂಪುಟ ಸೇರಿಕೊಂಡವರು: ಪ್ರಧಾನಿ: ಮನಮೋಹನ್ ಸಿಂಗ್ ಸಂಪುಟ ದರ್ಜೆ ಸಚಿವರು: ಪ್ರಣಬ್ ಮುಖರ್ಜಿ ಶರದ್ ಪವಾರ್ ಎ.ಕೆ.ಆಂಟನಿ ಪಿ.ಚಿದಂಬರಂ ಮಮತಾ ಬ್ಯಾನರ್ಜಿ ಎಸ್.ಎಂ.ಕೃಷ್ಣ ಗುಲಾಂ ನಬೀ ಆಜಾದ್ ಸುಶೀಲ್ ಕುಮಾರ್ ಶಿಂಧೆ ಎಂ.ವೀರಪ್ಪ ಮೊಯ್ಲಿ ಎಸ್.ಜೈಪಾಲ್ ರೆಡ್ಡಿ ಕಮಲನಾಥ್ ವಯಲಾರ್ ರವಿ ಮೀರಾ ಕುಮಾರ್ ಮುರಳಿ ದೇವ್ರಾ ಕಪಿಲ್ ಸಿಬಲ್ ಅಂಬಿಕಾ ಸೋನಿ ಬಿ.ಕೆ.ಹಾಂಡಿಕ್ ಆನಂದ ಶರ್ಮಾ ಸಿ.ಪಿ.ಜೋಷಿ |