ಉಗ್ರಗಾಮಿಗಳು ಜನಸಾಮಾನ್ಯರೊಂದಿಗೆ ಬೆರೆಯುವುದನ್ನು ತಪ್ಪಿಸುವ ಸಲುವಾಗಿ 2011ರೊಳಗೆ ಎಲ್ಲಾ ನಾಗರಿಕರಿಗೆ ವಿವಿಧೋದ್ದೇಶದ ಗುರುತು ಚೀಟಿಗಳನ್ನು ಒದಗಿಸಲು ಸರ್ಕಾರವು ಯುದ್ಧೋಪಾದಿಯ ಕಾರ್ಯವನ್ನು ಆರಂಭಿಸಿದೆ." ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು 2011ರಲ್ಲಿ ಸಿದ್ಧವಾಗಲಿದೆ ಮತ್ತು ವಿವಿಧೋದ್ದೇಶಿತ ರಾಷ್ಟ್ರೀಯ ಗುರುತು ಚೀಟಿ(ಎಂಎನ್ಐಸಿ)ಗಳನ್ನು ಎಲ್ಲಾ ನಿವಾಸಿಗಳಿಗೆ 2011ರಲ್ಲಿ ವಿತರಿಸಲಾಗುವುದು" ಎಂದು ಗೃಹಸಚಿವ ಪಿ.ಚಿದಂಬರಂ ಹೇಳಿದ್ದಾರೆ.ರಾಷ್ಟ್ರೀಯ ಜನಸಂಖ್ಯಾ ನೋಂದಣಿಯು ಪ್ರತಿ ನಾಗರಿಕರಿಗೂ ವಿಶೇಷವಾದ ರಾಷ್ಟ್ರೀಯ ಗುರುತಿನ ಸಂಖ್ಯೆಯನ್ನು ಒದಗಿಸಲು ಉದ್ದೇಶಿಸಿದೆ ಎಂಬುದಾಗಿ ಚಿದಂಬರಂ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.ಈ ಪ್ರಕ್ರಿಯೆ ಹಾಗೂ ತಂತ್ರಜ್ಞಾನದಲ್ಲಿ ಅಡಕವಾಗಿರುವ ಸಂಕೀರ್ಣತೆಯ ಹಿನ್ನೆಲೆಯಲ್ಲಿ ಪ್ರಾಯೋಗಿಕ ಆಧಾರದಲ್ಲಿ 30.95 ಲಕ್ಷ ಜನಸಂಖ್ಯೆಯ ಪೈಲಟ್ ಯೋಜನೆಯು ಜಾರಿಯ ಹಂತದಲ್ಲಿದೆ ಎಂದು ಅವರು ಹೇಳಿದರು. ಈ ಯೋಜನೆಯಲ್ಲಿ 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ ಸೇರಿದೆ. "ಕರಾವಳಿ ಜಿಲ್ಲೆಗಳು ಹಾಗೂ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಇದೀಗಾಗಲೇ ಕಾರ್ಯ ಆರಂಭವಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.ಗುರುತಿನ ಚೀಟಿಯು ಮೈಕ್ರೋಪ್ರೊಸೆಸರ್ ಚಿಪ್ ಹೊಂದಿರುವ ಒಂದು ಸ್ಮಾರ್ಟ್ ಕಾರ್ಡ್ಆಗಿದೆ. ಸರ್ಕಾರವು ನೇಮಿಸಿರುವ ತಾಂತ್ರಿಕ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಈ ಸ್ಮಾರ್ಟ್ ಕಾರ್ಡ್ ತಯಾರಿಸಲು ಮುಂದಾಗಿದ್ದು, ಇದೊಂದು ಸುರಕ್ಷಿತ ಕಾರ್ಡ್ ಆಗಿದೆ. ಸಮಿತಿಯಲ್ಲಿ ನ್ಯಾಶನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್, ಐಐಟಿ ಕಾನ್ಪುರ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್, ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್, ಇಂಟಲಿಜೆನ್ಸ್ ಬ್ಯೂರೋ ಹಾಗೂ ಇತರ ಸಂಸ್ಥೆಗಳ ಪ್ರಾತಿನಿಧ್ಯವಿದೆ. |