ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಛತ್ತೀಸ್‌ಗಡದ ರಾಯ್‌ಪುರ್ ಜೈಲಿನಲ್ಲಿದ್ದ ನಾಗರಿಕ ಹಕ್ಕುಗಳ ಕಾರ್ಯಕರ್ತ ಡಾ.ಬಿನಾಯಕ್ ಸೇನ್ ಅವರು ಮಂಗಳವಾರ ಬಂಧಮುಕ್ತಗೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಛತ್ತೀಸ್‌ಗಡ ಕಾರಾಗೃಹದಲ್ಲಿದ್ದ ಬಿನಾಯಕ್ ಸೇನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಸೋಮವಾರ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಸುಪ್ರೀಂ ಸೂಚನೆ ಮೇರೆಗೆ ಸೇನ್ ಅವರನ್ನು ಇಂದು ಬಿಡುಗಡೆಗೊಳಿಸಲಾಯಿತು.
ನಾನೊಬ್ಬ ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಎಂದಿನಂತೆ ನಾನು ನನ್ನ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದು ಜೈಲಿನಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಈ ಸಂದರ್ಭದಲ್ಲಿ ಸೇನ್ ಅವರನ್ನು ಪತ್ನಿ, ಮಕ್ಕಳು, ಅಪಾರ ಅಭಿಮಾನಿಗಳು ಸ್ವಾಗತಿ, ಸಿಹಿ ತಿಂಡಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಆದರೂ ತನಗೆ ತನ್ನ ಜೀವಕ್ಕೆ ಛತ್ತೀಸ್‌ಗಡ ಸರ್ಕಾರದಿಂದ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿರುವ ಬಿನಾಯಕ್ ಸೇನ್, ಆ ಆರೋಪವನ್ನು ತಾನು ವಿವರಿಸಲು ಹೋಗಲಾರೆ ಎಂದು ಹೇಳಿದರು. ನಾನು ಮಾವೋವಾದಿಗಳಿಗೆ ಯಾವುದೇ ಪ್ರತ್ಯೇಕವಾದ ಸಂದೇಶವನ್ನು ರವಾನಿಸಲಾರೆ. ಆದರೆ ನಾವು ಹಿಂಸೆಯನ್ನು ಬಲವಾಗಿ ಖಂಡಿಸುವುದಾಗಿ ಹೇಳಿದ ಸೇನ್, ಶಾಂತಿ ಎನ್ನುವುದು ಹಿಂಸೆಗಿಂತ ಪ್ರಬಲವಾದ ಅಸ್ತ್ರ ಎಂದರು. ಎಲ್ಲ ನಿಟ್ಟಿನಿಂದಲೂ ತಾನು ಹಿಂಸೆಯನ್ನು ಬಲವಾಗಿ ಖಂಡಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಮಾವೋವಾದಿಗಳೊಂದಿಗೆ ಸಖ್ಯ ಹೊಂದಿದ್ದಾರೆಂಬ ಆರೋಪದ ಮೇಲೆ ಛತ್ತೀಸ್‌ಗಡ ಸರ್ಕಾರ ಅವರನ್ನು ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿ ಇರಿಸಿತ್ತು. ಸುಪ್ರೀಂಕೋರ್ಟ್ ಕೂಡ ಕಳೆದ ಬಾರಿ ಸೇನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಪ್ರಸಿದ್ಧ ಮಾನವ ಹಕ್ಕು ಕಾರ್ಯಕರ್ತರಾಗಿದ್ದ ಸೇನ್ ಅವರ ಬಿಡುಗಡೆಗೆ ವಿಶ್ವದ 22ಕ್ಕೂ ಅಧಿಕ ನೊಬೆಲ್ ಪುರಸ್ಕೃತ ಸಾಹಿತಿಗಳು, ಹಲವು ಗಣ್ಯರು ಮನವಿ ಮಾಡಿದ್ದರು.
|