ಕೋಲ್ಕತಾ: ಕಳೆದೆರಡು ದಿನಗಳಿಂದ ಪಶ್ಚಿಮಬಂಗಾಳದ 13 ಜಿಲ್ಲೆಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿರುವ ಐಲಾ ಚಂಡಮಾರುತವು ಉತ್ತರ ಬಂಗಾಳವನ್ನು ತಲುಪಿದ್ದು, ಅಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಡಾರ್ಜಿಲಿಂಗ್‌ನಲ್ಲಿ ಭೂಕುಸಿತ ಸಂಭವಿಸಿದ್ದು, ಸತ್ತವರ ಸಂಖ್ಯೆಯನ್ನು 81ಕ್ಕೇರಿಸಿದೆ.
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಅತಿಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ. ಇಲ್ಲಿ 20 ಮಂದಿ ಐಲಾದ ರುದ್ರನರ್ತನಕ್ಕೆ ಆಹುತಿಯಾಗಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ 16, ಹೌರಾದಲ್ಲಿ 7, ಕೋಲ್ಕತಾ ಹಾಗೂ ಹೂಗ್ಲಿಯಲ್ಲಿ ಐದು, ಬಿರ್ಬುಂ ಮತ್ತು ಮುರ್ಶಿದಾಬಾದ್‌ನಲ್ಲಿ 3, ನಾಯ್ಡಾದಲ್ಲಿ 2 ಹಾಗೂ ಬಂಕುರ, ಪೂರ್ವ ಮಿಡ್ನಾಪುರ, ಕೂಚ್ ಬಿಹಾರ್ ಮತ್ತು ಮಾಲ್ಡಾಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಡಾರ್ಜಿಲಿಂಗ್‌ನಲ್ಲಿ ಸಂಭವಿಸಿರುವ ಭೂಕುಸಿತದಿಂದಾಗಿ ಮಣ್ಣಿನಡಿ ಹೂತುಹೋಗಿದ್ದ 10 ಶವಗಳನ್ನು ಅವಶೇಷಗಳಿಂದ ಹೊರತೆರೆಯಲಾಗಿದೆ. ಮತ್ತು ಇತರ ಆರು ಮಂದಿ ಕುರ್ಸೇಂಗ್ ಎಂಬಲ್ಲಿ ಮಣ್ಣು ಕುಸಿತದಿಂದ ಸಾವನ್ನಪ್ಪಿದ್ದಾರೆ ಎಂದು ಡಾರ್ಜಿಲಿಂಗ್‌ನ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಪಿ. ಜಿಂಬಾ ಅವರು ತಿಳಿಸಿದ್ದಾರೆ.
ಬೆಟ್ಟ ಪ್ರದೇಶವಾಗಿರುವ ಡಾರ್ಜಿಲಿಂಗ್‌ಗೆ ಉಳಿದ ಪ್ರದೇಶಗಳ ಸಂಪರ್ಕ ಕಡಿದು ಹೋಗಿದೆ. |