ಎರಡನೆ ಬಾರಿಗೆ ಮುಖ್ಯಮಂತ್ರಿ ಗದ್ದುಗೆಗೇರಿರುವ ಆಂಧ್ರ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ತಮ್ಮ ಸಚಿವರಿಗೆ ಖಾತೆಗಳನ್ನು ಘೋಷಿಸಿದ್ದು, ರಾಜ್ಯದ ಇತಿಹಾಸದಲ್ಲಿ ಪ್ರಥಮವಾಗಿ ಮಹಿಳೆಯೊಬ್ಬರು ಗೃಹಖಾತೆಯನ್ನು ಪಡೆದಿದ್ದಾರೆ.
ವೈ.ಎಸ್. ರಾಜಶೇಖರ ರೆಡ್ಡಿಯವರ ದತ್ತು ಸಹೋದರಿಯಾಗಿರುವ ಪಿ. ಸಬಿತಾ ಇಂದ್ರಾ ರೆಡ್ಡಿ ಅವರು ಈ ಖಾತೆಯನ್ನು ಪಡೆದಿದ್ದಾರೆ. ಈ ಖಾತೆಯನ್ನು ಅವರ ದಿವಂಗತ ಪತಿ ಈ ಹಿಂದೊಮ್ಮೆ ಪಡೆದಿದ್ದರು.
ಸಬಿತಾ ಅವರು ರಾಜಶೇಖರ ರೆಡ್ಡಿಯವರ ಈ ಹಿಂದಿನ ಸಂಪುಟದಲ್ಲಿ ಗಣಿಹಾಗೂ ಭೂಗರ್ಭ ಖಾತೆಯನ್ನು ಹೊಂದಿದ್ದರು. 1994-95ರಲ್ಲಿ ಎನ್.ಟಿ. ರಾಮರಾವ್ ಅವರ ಸಂಪುಟದಲ್ಲಿ ಗೃಹಸಚಿವರಾಗಿದ್ದ ತನ್ನ ಪತಿ ಇಂದ್ರ ರೆಡ್ಡಿ ಅವರ ಹೆಜ್ಜೆ ಜಾಡನ್ನು ಸಬಿತಾ ಹಿಡಿದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಖಾತೆಯನ್ನು ಮುಖ್ಯಮಂತ್ರಿ ರೆಡ್ಡಿ ತಾವೇ ಇರಿಸಿಕೊಳ್ಳಲಿದ್ದಾರೆ.
"ಗೃಹಸಚಿವೆ ಯಾಗುತ್ತಿರುವುದರಿಂದ ರೋಮಾಂಚನಗೊಂಡಿದ್ದೇನೆ. ಒಂದು ಕಾಲದಲ್ಲಿ ತನ್ನ ಪತಿಹೊಂದಿದ್ದ ಖಾತೆಯನ್ನು ಪಡೆಯುತ್ತಿರುವುದು ತುಂಬ ಸಂತೋಷವಾಗಿದೆ" ಎಂದು ಸಬಿತಾ ಪ್ರತಿಕ್ರಿಯಿಸಿದ್ದಾರೆ. ರೆಡ್ಡಿಯವರ ಹಿಂದಿನ ಸಂಪುಟದಲ್ಲಿ ಕೆ. ಜನಾ ರೆಡ್ಡಿ ಅವರು ಈ ಖಾತೆ ಹೊಂದಿದ್ದರು. ಈ ಬಾರಿ ಮುಖ್ಯಮಂತ್ರಿಗಳು ಕೈ ಬಿಟ್ಟಿರುವ ನಾಲ್ವರು ಹಿರಿಯ ಸಚಿವರಲ್ಲಿ ಜನಾ ರೆಡ್ಡಿಯವರೂ ಸೇರಿದ್ದಾರೆ.
2003ರಲ್ಲಿ ರಾಜಶೇಖರ ರೆಡ್ಡಿಯವರು ತಮ್ಮ 1,450 ಕಿಲೋಮೀಟರ್ ಪಾದಯಾತ್ರೆಯನ್ನು ಸಬಿತಾರ ತವರೂರು ಚೆವೆಲ್ಲಾದಿಂದ ಆರಂಭಿಸಿದ್ದರು. 2004ರಲ್ಲಿ ರೆಡ್ಡಿ ಅವರು ಮುಖ್ಯಮಂತ್ರಿಗಳಾದರು. ಇದಾದ ಬಳಿಕ ಚೆವೆಲ್ಲಾ ಅವರ ಅತ್ಯಂತ ಪ್ರೀತಿಯ ಸ್ಥಳವಾಗಿದ್ದು, ಅವರ ಎಲ್ಲಾ ಕಾರ್ಯಕ್ರಮಗಳನ್ನು ಚೆವೆಲ್ಲಾದಿಂದಲೇ ಆರಂಭಿಸುತ್ತಾರೆ. ಇದೇ ಊರಿನವರಾಗಿರುವ ಸಬಿತಾರನ್ನು ತನ್ನ ದತ್ತು ಸಹೋದರಿ ಎಂದು ಪರಿಗಣಿಸಿರುವ ರೆಡ್ಡಿ, ಅವರನ್ನು 'ಚೆವೆಲ್ಲಾ ಚೆಲ್ಲಮ್ಮ' ಎಂದು ಕರೆದಿದ್ದರು. ಈಗ ಸಬಿತಾ ಇದೇ ಹೆಸರಿನಿಂದ ಜನಪ್ರಿಯರು.
ರೆಡ್ಡಿ ಅವರು ತಮ್ಮ 35 ಮಂದಿಯ ಸಚಿವ ಸಂಪುಟದಲ್ಲಿ ಆರುಮಂದಿ ಮಹಿಳೆಯರು ಹಾಗೂ 20 ಹೊಸಮುಖಗಳನ್ನು ಸೇರಿಸಿದ್ದಾರೆ. ತನ್ನ ಹಿಂದಿನ ಮಂತ್ರಿ ಮಂಡಲದ ಕೇವಲ 15 ಸಚಿವರನ್ನು ಮಾತ್ರ ಉಳಿಸಿಕೊಂಡಿದ್ದಾರೆ. |