ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸಂಸದರು ಸಂಪುಟದರ್ಜೆ ಖಾತೆಗಾಗಿ ಪಟ್ಟು ಹಿಡಿದಿರುವ ಕಾರಣ ಮನಮೋಹನ್ ಸಿಂಗ್ ಸಂಪುಟದ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ನಾಯಕರು ಪರದಾಡುವಂತಾಗಿದೆ.
ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನು ತೃಪ್ತಿಗೊಳಿಸುವುದರೊಂದಿಗೆ ತನ್ನದೇ ಪಕ್ಷದ ಸಂಸದರು ಹಾಗೂ ಎಲ್ಲಾ ರಾಜ್ಯಗಳು, ಪ್ರಾಂತ್ಯಗಳನ್ನು ಸಮತೋಲನಗೊಳಿಸಬೇಕಾಗಿದೆ. ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರುಗಳು ಮಂಗಳವಾರ ಎರಡೆರಡು ಸಭೆ ನಡೆಸಿ ಅಂತಿಮ ಪಟ್ಟಿಯನ್ನು ತಯಾರಿಸಿದ್ದಾರಾದರೂ, ಬುಧವಾರ ಈ ಪಟ್ಟಿಗೆ ಅಂತಿಮ ರೂಪುರೇಷೆ ನೀಡಲಾಗುವುದು. ಮನಮೋಹನ್ ಸಿಂಗ್ ಸಂಪುಟದ ಪ್ರಥಮ ಹಂತದ ವಿಸ್ತರಣೆಯು ಗುರುವಾರ ನಡೆಯಲಿದೆ.
ಜಾತಿ ಹಾಗೂ ಪ್ರಾಂತೀಯ ಪರಿಗಣನೆಗಳಿಗೆ ಅನುಗುಣವಾಗಿ ಖಾತೆ ಹಂಚಿಕೆಯನ್ನು ಸರಿದೂಗಿಸಬೇಕಾಗಿರುವ ಕಾರಣ ಸಂಪುಟ ವಿಸ್ತರಣೆಯಲ್ಲಿ ಅನಿರೀಕ್ಷಿತ ವಿಳಂಬ ತಲೆದೋರಿದೆ. ಸಚಿವ ಸ್ಥಾನಾಕಾಂಕ್ಷಿ ಸಂಸದರ ಸಂಖ್ಯೆಯ ಹೆಚ್ಚಳವು ಪಟ್ಟಿಯು ಗರಿಷ್ಠ ಮಿತಿ 81ನ್ನು ತಲುಪುವಂತೆ ಮಾಡಿದ್ದರೂ, ಪಕ್ಷವು ಕೆಲವು ಸ್ಥಾನಗಳನ್ನು ಮುಂದಿನ ವಿಸ್ತರಣೆಗೆ ಉಳಿಸಿಕೊಳ್ಳಲು ಆಸಕ್ತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಉತ್ತರ ಪ್ರದೇಶದಲ್ಲಿ ಪಕ್ಷವು 21 ಸ್ಥಾನಗಳನ್ನು ಗೆದ್ದಿರುವ ಕಾರಣ ಆ ರಾಜ್ಯವು ಹೆಚ್ಚಿನ ಪಾಲು ಪಡೆಯ ಬಹುದಾಗಿದೆ. ಉತ್ತರ ಪ್ರದೇಶ ಹಾಗೂ ಬಿಹಾರಗಳಲ್ಲಿ ಕಾಂಗ್ರೆಸ್ ಮರುಜೀವ ಗಳಿಸಲು ಪ್ರಯತ್ನಿಸುತ್ತಿದ್ದು ಗತವೈಭವಕ್ಕೆ ಮರಳುವ ಇಚ್ಚೆ ಹೊಂದಿದೆ.
ಆಂಧ್ರಪ್ರದೇಶವು 33 ಸಂಸದರನ್ನು ನೀಡಿದ್ದು, ಇದೂ ಸಹ ದೊಡ್ಡ ಬೇಡಿಕೆಯನ್ನು ಮುಂದಿಟ್ಟಿದೆ. ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಗೆದ್ದಿರುವ ರಾಜ್ಯಗಳಿಗೆ ಖಾತೆ ಹಂಚಿಕೆ ಮಾಡಲು ಪಕ್ಷವು ಹಗ್ಗದ ಮೇಲಿನ ನಡಿಗೆ ಮಾಡಬೇಕಾಗಿದೆ. ರಾಜಸ್ಥಾನ ಇದೀಗಾಗಲೇ ಒಂದು ಸಂಪುಟ ದರ್ಜೆ ಸಚಿವ ಸ್ಥಾನ ಪಡೆದಿದ್ದರೂ ಮತ್ತಷ್ಟು ಸ್ಥಾನಗಳನ್ನು ಎದುರು ನೋಡುತ್ತಿದೆ. ಸಿ.ಪಿ. ಜೋಷಿ ಅವರು ಈಗಾಗಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಜಾಟ್ ಸಮುದಾಯಕ್ಕೂ ಪ್ರಾತಿನಿಧ್ಯ ನೀಡುವುದು ಅಗತ್ಯವಾಗಿದೆ ಎಂಬತ್ತರ ಹರೆಯದ ಸಿಸಾರಾಮ್ ಓಲಾ ಅವರನ್ನು ಕೈಬಿಟ್ಟುದೇ ಆದರೆ, ಐವರು ಚೊಚ್ಚಲ ಸಂಸದರಿಂದ ಹೊಸ ಮುಖದ ಆಯ್ಕೆ ನಡೆಯುತ್ತದೆ. ಓಲಾ ಅವರು ಪ್ರಧಾನಿಯವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ 19 ಮಂದಿಯಲ್ಲಿ ಸೇರಿಲ್ಲ. ಜಾಟ್ ಸಮುದಾಯವು ಮೀನಾ ಹಾಗೂ ಗುಜ್ಜಾರ್ ಸಮುದಾಯದೊಂದಿಗೆ ರಾಜ್ಯಖಾತೆಗಾಗಿ ಸ್ಫರ್ಧೆಯಲ್ಲಿದೆ.
ಈ ಮಧ್ಯೆ, ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಸಂಪುಟ ಖಾತೆ ಪಡೆದಿರುವುದು ಕರ್ನಾಟಕದಿಂದ ಆಯ್ಕೆಯಾಗಿರುವ ಇಬ್ಬರು ಹಿರಿಯ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರ ಹೊಟ್ಟೆ ಉರಿಸಿದೆ. ಕೃಷ್ಣ ಅವರು ಚುನಾವಣೆಗೆ ನಿಂತು ಗೆದ್ದಿಲ್ಲ. ಅವರು ರಾಜ್ಯಸಭಾ ಸದಸ್ಯರು. ಜೆಡಿಎಸ್‍ನಿಂದ ಕಾಂಗ್ರೆಸ್‌ಗೆ ವಲಸೆ ಬಂದಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಿಪಕ್ಷ ಮುಖಂಡನ ಸ್ಥಾನ ನೀಡಲು, ಒಲ್ಲದ ಖರ್ಗೆಯವರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಸ್ಥಾನ ನೀಡಬೇಕಿರುವುದು ಪಕ್ಷದ ಧರ್ಮ. ಆದರೆ ರಾಜ್ಯಖಾತೆ ನೀಡಲು ಅವರು ಹಿರಿತನ ಅಢ್ಡಿಯಾಗುತ್ತದೆ ಎನ್ನಲಾಗಿದೆ.
ಈ ಮಧ್ಯೆ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸ್ಥಾನ ಸಿಕ್ಕಿರುವಾಗ ತನಗೂ ಯಾಕಿಲ್ಲ ಎಂಬುದಾಗಿ ಇನ್ನೋರ್ವ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರೂ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಕಳೆದ ಬಾರಿ ಯುಪಿಎ ಸಂಪುಟದಲ್ಲಿ ಸಚಿವರಾಗಿದ್ದ ಐದುಬಾರಿ ಗೆದ್ದು ಬಂದಿರುವ ಕೋಲಾರದ ಸಂಸದ ಮುನಿಯಪ್ಪ ಅವರೂ ಸ್ಫರ್ಧೆಯಲ್ಲಿದ್ದಾರೆ. ಇವರಲ್ಲಿ ಯಾರಿಗಾದರೂ ಅದೃಷ್ಟ ಒಲಿಯುತ್ತದೆಯೋ ಎಂಬುದು ಸಂಪುಟ ವಿಸ್ತರಣೆ ವೇಳೆಗಷ್ಟೆ ಗೊತ್ತಾಗಬೇಕಾಗಿದೆ.
ತಮಿಳ್ನಾಡಿನಿಂದ ಆಯ್ಕೆಯಾಗಿರುವ ಲೋಕಸಭಾ ಸದಸ್ಯರಲ್ಲದೆ, ರಾಜ್ಯಸಭಾ ಸದಸ್ಯರೂ ಒಂದು ಕೈ ನೋಡುತ್ತಿದ್ದಾರೆ. ಈ ಮಧ್ಯೆ, ಮಹಾರಾಷ್ಟ್ರವು ಮರಾಟ್ವಾಡ, ವಿದರ್ಭ ಹಾಗೂ ಮುಂಬೈಗೆ ತಲಾ ಒಂದೊಂದು ಸ್ಥಾನ ಯಾಚಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ನಲ್ಲಿ ಚುನಾವಣೆಗಳು ನಡೆಯಲಿರುವ ಕಾರಣ ಇದು ಹೆಚ್ಚಿನ ಆದ್ಯತೆಯ ರಾಜ್ಯವಾಗಿದೆ.
ಗುಜರಾತ್ ಸಹ ತನ್ನಪಾಲಿಗೆ ಹೋರಾಡುತ್ತಿದೆ. ಶಂಕರ್ ಸಿನ್ಹಾ ನ ವಾಘೇಲ ಹಾಗೂ ಮಧುಸೂದನ್ ಮಿಸ್ರಿ ಅವರ ಸೋಲು ಇತರರಿಗೆ ಬಾಗಿಲು ತೆರೆದಿದೆ. ಭಾರತ್ ಸಿನ್ಹಾ ಸೋಲಂಕಿ ಅವರು ಪ್ರಬಲ ಸ್ಫರ್ಧಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್‌ಗೆ ಕಾಂಗ್ರೆಸ್ ರಾಜ್ಯಸಚಿವ ಖಾತೆಯನ್ನು ಮುಂದಿಟ್ಟಿದೆ. ಇದೇವೇಳೆ ಫಾರೂಕ್ ಅಬ್ದುಲ್ಲಾ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳವ ಕುರಿತು ಮಾತುಕತೆ ನಡೆಯುತ್ತದೆ. ಸೈಫುದ್ದೀನ್ ಸೋಜಾ ಅವರು ಕಾಂಗ್ರೆಸ್ ಸ್ಫರ್ಧಿ.
ಕಾಂಗ್ರೆಸ್ ಉತ್ತಮ ಕಾರ್ಯಕ್ಷಮತೆ ತೋರದ ಜಾರ್ಖಂಡ್, ಛತ್ತೀಸ್‌ಗಢ್ ಹಾಗೂ ಹಿಮಾಚಲ ಪ್ರದೇಶಗಳಿಗೂ ಆಯ್ಕೆಗಳ ಕುರಿತು ಕಾಂಗ್ರೆಸ್ ಯೋಚಿಸುತ್ತಿದೆ. ಇದರಲ್ಲಿ ಜಾರ್ಖಂಡ್ ಸದ್ಯವೇ ವಿಧಾನಸಭಾ ಚುನಾವಣೆ ಎದುರಿಸಲಿದೆ. ಛತ್ತೀಸ್‌ಗಢದಿಂದ ಆಯ್ಕೆಯಾಗಿರುವ ಏಕೈಕ ಸದಸ್ಯ ಚರಣ್ ದಾಸ್ ಮಹಂತ್ ಅವರಿಗೆ ಸ್ಥಾನ ನೀಡುವುದೇ ಬಿಡುವುದೇ ಎಂಬುದು ಬುಧವಾರ ಅಂತಿಮಗೊಳ್ಳಲಿದೆ. |