ಸಂಪುಟ ವಿಸ್ತರಣೆ ಕುರಿತು ಬುಧವಾರ ಸಭೆ ಸೇರಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಚಿವರ ಪಟ್ಟಿಯನ್ನು ಅಂತ್ಯಗೊಳಿಸಿದ್ದು, ಸಂಭಾವ್ಯ ಸಚಿವರಿಗೆ ಇದೀಗಾಗಲೇ ಕರೆ ಹೋಗಿದೆ.ಗುರುವಾರ ಮುಂಜಾನೆ 11.30ಕ್ಕೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ ಸೇರಿದಂತೆ ಸಚಿವರ ಗಢಣ ಪ್ರತಿಜ್ಞಾವಿಧಿ ಸ್ವೀಕರಿಸಲಿದೆ.ಮಂಗಳವಾರದ ಸಭೆಯಲ್ಲಿ ಪಟ್ಟಿ ಶೇ.50ರಷ್ಟು ಪೂರ್ಣಗೊಂಡಿತ್ತಾದರೂ, ಬುಧವಾರ ಮಧ್ಯಾಹ್ನದ ವೇಳೆ ಸಚಿವ ಪಟ್ಟಿಗೆ ಅಂತಿಮ ರೂಪ ನೀಡಲಾಗಿದೆ.ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳಿಂದ ಸಚಿವರಾಗಲಿರುವವರಿಗೆ ಪ್ರಧಾನಿ ಸಿಂಗ್ ಹಾಗೂ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಕರೆ ನೀಡಿದ್ದಾರೆ.ದಯಾನಿಧಿ ಮಾರನ್, ಫಾರೂಕ್ ಅಬ್ದುಲ್ಲಾ, ಅಜಯ್ ಮಕೇನ್, ವೀರಭದ್ರ ಸಿಂಗ್, ಪೃಥ್ವಿರಾಜ್ ಚೌವಾಣ್, ಶ್ರೀಪ್ರಕಾಶ್ ಜೈಸ್ವಾಲ್, ಜಿ.ಕೆ. ವಾಸನ್, ಭಕ್ತ ಚರಣ್ ದಾಸ್, ಎಂ. ರಾಮಚಂದ್ರನ್, ಕೆ.ವಿ. ಥಾಮಸ್, ಅಳಗಿರಿ, ಶಶಿ ಥರೂರ್ ಸೇರಿದಂತೆ ಸುಮಾರು 50 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಕೋರ್ ಸಮಿತಿಯು ಈ ಕುರಿತು ಮಂಗಳವಾರ ಸಭೆ ನಡೆಸಿ ಹಲವು ಸುತ್ತುಗಳ ಮಾತುಕತೆ ನಡೆಸಿತ್ತು. ಇದಲ್ಲದೆ, ಸೋನಿಯಾಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೂ ಸುದೀರ್ಘ ಮಾತುಕತೆ ನಡೆಸಿದ್ದರು.ಡಿಎಂಕೆಯ ಅಳಗಿರಿ, ದಯಾನಿಧಿ ಮಾರನ್, ಎ. ರಾಜಾ ಅವರುಗಳು ಸಂಪುಟ ದರ್ಜೆ ಸಚಿವರಾಗಲಿದ್ದಾರೆ. ಎಸ್.ಎಸ್. ಪಳನಿಮಾಣಿಕಮ್, ಜಗತ್ರಕ್ಷಕನ್, ಗಾಂಧಿ ಸೆಲ್ವನ್ ಮತ್ತು ಡಿ. ನೆಪೋಲಿಯನ್ ಅವರುಗಳು ರಾಜ್ಯಖಾತೆ ಹೊಂದಲಿದ್ದಾರೆ.ಸಿಂಗ್ ಅವರ ಸಂಪುಟವು ಅನುಭವಿಗಳು, ಹೊಸಬರು, ಹಳಬರ ಒಂದು ಮಿಶ್ರಣವಾಗಿ ರೂಪುಗೊಳ್ಳಲಿದೆ. |