ಚಂಡಮಾರುತ ಐಲಾ ಮಾಡಿರುವ ಅವಾಂತರದಿಂದ ಕಂಗೆಟ್ಟಿದ್ದ ಕುಳಿತಿದ್ದ ವೇಳೆ, ಇದೇ ಅವಾಂತರದಿಂದ ದಿಕ್ಕು ತಪ್ಪಿದ್ದ ಹೆಣ್ಣುಹುಲಿಯೊಂದು ಮನೆಯೊಂದಕ್ಕೆ ನುಗ್ಗಿ, ಮೊದಲೇ ಭಯಭೀತರಾಗಿದ್ದವರಿಗೆ ಮತ್ತಷ್ಟು ಆಘಾತ ನೀಡಿದ ಘಟನೆ ದಕ್ಷಿಣ 24 ಪರಗಣ ಜಿಲ್ಲೆಯ ಗೊಸಬಾ ಪೊಲೀಸ್ ಠಾಣಾವ್ಯಾಪ್ತಿಯ ಮನೆಯೊಂದರಲ್ಲಿ ಸಂಭವಿಸಿದೆ.ಗೊಸಬಾ ಪೊಲೀಸ್ ಠಾಣಾವ್ಯಾಪ್ತಿಯ ಜೇಮ್ಸ್‌ಪುರ ಗ್ರಾಮದ ನಿವಾಸಿಯಾಗಿರುವ ಪಿಂಟು ಮಿರ್ಧಾ ಹಾಗೂ ಅವರ ಕುಟುಂಬದ ಸದಸ್ಯರು ತಮ್ಮ ಮನೆಯ ಸುತ್ತ ಪ್ರವಾಹದ ನೀರು ತುಂಬಿದ ಕಾರಣ ಏನೂ ಮಾಡಲು ತೋಚದೆ ಮನೆಯೊಳಗೆ ಸಿಕ್ಕಿಬಿದ್ದಿದ್ದರು. ನೀರಿನ ಮಟ್ಟ ಹೆಚ್ಚುತ್ತಿರುವಂತೆ, ಮಳೆ ಬಿರುಗಾಳಿಯಿಂದ ವಿಷಣ್ಣರಾಗಿದ್ದ ಪಿಂಟು ಅವರು ತಮ್ಮ ಮನೆಯ ಕೊಠಡಿಯೊಂದರಲ್ಲಿ ಬಲಿತ ಹುಲಿಯೊಂದನ್ನು ಕಂಡಾಗ ಮರಗಟ್ಟಿಹೋದರು. ಮಿರ್ಧಾ ಅವರು ಆ ಕೊಠಡಿಗೆ ಬೀಗ ಜಡಿದು ಬೊಬ್ಬೆಹೊಡೆದರೆಂದು ಸುಂದರ್‌ಬನ್ಸ್ ಹುಲಿಧಾಮದ ಕ್ಷೇತ್ರ ನಿರ್ದೇಶಕ ಸುಬ್ರತ್ ಮುಖರ್ಜಿ ತಿಳಿಸಿದ್ದಾರೆ. ಅಲ್ಲಿಗೆ ತೆರಳಿದ ಅರಣ್ಯಾಧಿಕಾರಿಗಳು ಮೊದಲು ಕುಟುಂಬವನ್ನು ರಕ್ಷಿಸಿ, ಬಳಿಕ ಹುಲಿಯನ್ನು ಬೋನಿಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದು, ಕಾಡಿಗೆ ಬಿಟ್ಟಿದ್ದಾರೆ.ಸುಂದರ್‍ಬನ್ಸ್ ಹುಲಿಧಾಮದ ಈ ಹುಲಿಯು ಪ್ರವಾಹದ ಮಟ್ಟ ಏರಿದಾಗ ದಿಕ್ಕುಗಾಣದೆ ಪಿಂಟು ಮನೆ ಪ್ರವೇಶಿಸಿರಬೇಕು ಎಂದು ಸುಬ್ರತ್ ಅಭಿಪ್ರಾಯಿಸಿದ್ದಾರೆ. ಆದರೆ ಐದುಸದಸ್ಯರ ಕುಟುಂಬಕ್ಕೆ ಈ ನರಭಕ್ಷಕ ಯಾವುದೇ ಹಾನಿಯುಂಟುಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.ಇದಲ್ಲದೆ ವನ್ಯಧಾಮದ ಇತರ ಎರಡು ಜಿಂಕೆಗಳು ತಪ್ಪಿಸಿಕೊಂಡು ಸತ್ಯನಾರಾಯಣಪುರ ಗ್ರಾಮಕ್ಕೆ ನುಗ್ಗಿದ್ದವು. ಇವುಗಳನ್ನು ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ಅವರು ನುಡಿದರು.ಪ್ರವಾಹದಿಂದಾಗಿ ಡಜನ್‌ಗಟ್ಟಲೆ ಹುಲಿಗಳು ಸುಂದರ್‌ಬನ್ಸ್‌ನಿಂದ ಕೊಚ್ಚಿ ಹೋಗಿವೆ ಎಂಬ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಅವರು ನಮಗೆ ಅಂತಹ ವರದಿಗಳು ಬಂದಿಲ್ಲ ಎಂದು ನುಡಿದರು. |