ಮುಂಬೈದಾಳಿಕೋರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಇತರ ಒಂಬತ್ತು ಮಂದಿಯೊಂದಿಗೆ ನವೆಂಬರ್ 26ರಂದು ನಗರದ ಕರಾವಳಿಯಲ್ಲಿ ದೋಣಿಯಲ್ಲಿ ಬಂದಿಳಿದ ಎಂಬುದಾಗಿ ಬುಧವಾರ ವಿಶೇಷ ನ್ಯಾಯಾಲಯದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಗುರುತಿಸಿದ್ದಾರೆ.
ಈ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ಪ್ರಾಸಿಕ್ಯೂಶನ್‌ಗೆ ಅತ್ಯಂತ ಪ್ರಮುಖವಾಗಿದೆ. ದಕ್ಷಿಣ ಮುಂಬೈಯ ವಿವಿಧೆಡೆ ದಾಳಿನಡೆಸುವ ಮುನ್ನ ಹತ್ತು ಮಂದಿ ಬಂದೂಕುದಾರಿಗಳು ಆಗಮಿಸಿರುವುದನ್ನು ಕಂಡ ಪ್ರಥಮ ಸ್ವತಂತ್ರ ಪ್ರತ್ಯಕ್ಷದರ್ಶಿ ಇವರಾಗಿದ್ದಾರೆ.
ಹೋಟೇಲ್ ತಾಜ್‌ನಲ್ಲಿ ಮೇಲ್ವಿಚಾರಕರಾಗಿರುವ ಭಾರತ್ ತಮೋರ್ ಎಂಬವರು ತಾನು ಕಸಬ್ ಮತ್ತು ಇತರರು ಫಿಶರ್‌ಮನ್ ಕಾಲೋನಿಯಲ್ಲಿ ದೋಣಿಯಿಂದ ಇಳಿಯುವುದನ್ನು ನೋಡಿರುವುದಾಗಿ ಹೇಳಿದ್ದಾರೆ. ರಾತ್ರಿ ಸುಮಾರು 9.15ರ ವೇಳೆಗೆ ತಾನು ಕರ್ತವ್ಯಕ್ಕೆ ತೆರಳುವ ವೇಳೆಗೆ ದಾಳಿಕೋರರ ಗುಂಪು ಬಂದಿಳಿಯಿತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇವರನ್ನು ಯಾರು ಎಂದು ಪ್ರಶ್ನಿಸಿದಾಗ ಸೂಕ್ತ ಉತ್ತರ ಲಭಿಸಿಲ್ಲ, ಬದಲಿಗೆ ಇಬ್ಬರು ಉಗ್ರಗಾಮಿಗಳು ತನ್ನೊಡನೆ ವಾದಕ್ಕೆ ನಿಂತರು ಎಂದು ಅವರು ನ್ಯಾಯಾಲಯದ ಮುಂದೆ ಹೇಳಿದ್ದಾರೆ. |