ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಸತ್ಯಾಗ್ರಹ ಹೂಡುವಂತಿಲ್ಲ ಎಂದು ಬುಧವಾರ ಹೇಳಿರುವ ಸುಪ್ರೀಂಕೋರ್ಟ್ ಶೈಕ್ಷಣಿಕ ಸಂಸ್ಥೆಗಳೊಳಗೆ ಯಾವದೇ ರೀತಿಯ ಪ್ರತಿಭಟನೆ ಅಥವಾ ಪ್ರದರ್ಶನ ನಡೆಸುವ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
"ನೀವು ಸತ್ಯಾಗ್ರಹಗಳನ್ನು ನಡೆಸಿ ಭಿತ್ತಿಪತ್ರಗಳ ಪ್ರದರ್ಶನ ನಡೆಸಿದರೆ ಒಂದು ಶೈಕ್ಷಣಿಕ ಸಂಸ್ಥೆ ಕಾರ್ಯನಿರ್ವಹಿಸುವುದು ಹೇಗೆ? ನೀವು ಮಹಾತ್ಮಾಗಾಂಧಿಯಲ್ಲ" ಎಂದು ನ್ಯಾಯಮೂರ್ತಿಗಳಾದ ಮರ್ಕಾಂಡೇಯ ಕಟ್ಜು ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ರಜಾಕಾಲದ ಪೀಠವು, ವಿದ್ಯಾರ್ಥಿನಿಯೊಬ್ಬಾಕೆಯ ಮನವಿಯನ್ನು ವಜಾಗೊಳಿಸುತ್ತಾ ಹೇಳಿದೆ.
ಇಂದುಲೇಖಾ ಜೋಸೆಫ್ ಎಂಬಾಕೆ, ಕೇರಳದ ಕಾಲೇಜೊಂದು ಅಶಿಸ್ತಿನ ಕಾರಣದಿಂದ ತನ್ನನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸುವ ವೇಳೆಗೆ ಈ ಮಹತ್ವದ ತೀರ್ಪು ನೀಡಿದೆ.
ಕಾಲೇಜಿನಲ್ಲಿನ ಲೋಪದೋಷಗಳನ್ನು ಎತ್ತಿತೋರಿಸುವುದಕ್ಕಾಗಿ ತಾನು ಪ್ರತಿಭಟನೆ ನಡೆಸಿರುವುದಾಗಿ ಕೊಟ್ಟಾಯಂ ಅರುವಿತೂರ್ ಎಂಬಲ್ಲಿನ ಸೈಂಟ್ ಜಾರ್ಜ್ ಎಂಬ ವಿದ್ಯಾರ್ಥಿನಿ ಇಂದುಲೇಖ ಮನವಿಯಲ್ಲಿ ಹೇಳಿದ್ದರು.
ವಿದ್ಯಾರ್ಥಿನಿಯ ವಕೀಲರಾದ ಸಾಜಿ ಥಾಮಸ್ ಅವರು, ವಿದ್ಯಾರ್ಥಿನಿ ಬೇಷರತ್ ಕ್ಷಮೆ ಯಾಚಿಸುವುದಾಗಿ ಮತ್ತು ಆಕೆಯನ್ನು ಕ್ಷಮಿಸಬೇಕೆಂದು ಮಾಡಿದ ಮನವಿಯನ್ನೂ ನ್ಯಾಯಪೀಠ ತಳ್ಳಿಹಾಕಿತು.
"ಇದರ ಬಗ್ಗೆ ನಾವು ಚಿಂತಿಸುವುದಿಲ್ಲ. ನೀವು ಎಲ್ಲಾ ರೀತಿಯ ಕ್ಷಮೆಗಳನ್ನು ಯಾಚಿಸಬಹುದು. ನೀವು ಯಾರನ್ನಾದರೂ ಚೂರಿಯಿಂದ ಇರಿದು ಬಳಿಕ ಕ್ಷಮಿಸಿ ಅನ್ನಬಹುದು. ಅಥವಾ ಯಾರನ್ನಾದರೂ ಗುಂಡಿಕ್ಕಿ ಕೊಂದು ಕ್ಷಮಿಸಿ ಅನ್ನಬಹುದು. ನೀವು ವಿದ್ಯಾರ್ಥಿಯೋ ಅಥವಾ ಇನ್ನೇನೋ? ನೀವು ಇಂತಹ ಅಭ್ಯಾಸಗಳನ್ನಿಟ್ಟುಕೊಂಡರೆ ಒಂದು ಶೈಕ್ಷಣಿಕ ಸಂಸ್ಥೆ ನಡೆಯುವುದಾದರೂ ಹೇಗೆ? ಎಂಬುದಾಗಿ ಕ್ಷಮೆಯನ್ನು ಸ್ವೀಕರಿಸಲು ನಿರಾಕರಿಸುತ್ತಾ ನ್ಯಾಯಪೀಠ ಹೇಳಿತು.
ವಿದ್ಯಾರ್ಥಿನಿಯು ಗುಣಪಡಿಸಲಾಗದ ಖಾಯಿಲೆಯಿಂದ ಬಳಲುತ್ತಿದ್ದು, ಆಕೆಗೆ ಕಿಡ್ನಿ ಕಸಿಯ ಅವಶ್ಯಕತೆ ಇದೆ ಎಂಬುದಾಗಿಯೂ ವಕೀಲರು ಮಾಡಿಕೊಂಡ ಅರಿಕೆಯನ್ನು ನ್ಯಾಯಪೀಠ ಪರಿಗಣಿಸಲಿಲ್ಲ. |