ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂಬ ತನ್ನ ಒತ್ತಾಯವು, ತನ್ನ ಅಥವಾ ಪಕ್ಷದ ವೈಯಕ್ತಿಕ ಅಭಿಪ್ರಾಯವಲ್ಲ, ಇದು ಜನ ಸಾಮಾನ್ಯರ ಒತ್ತಾಯವಾಗಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ತಾನು ತನ್ನ ವಿಕಾಸ ಯಾತ್ರೆಯನ್ನು ಜೂನ್ ತಿಂಗಳ ಮೊದಲ ವಾರದಿಂದ ಆರಂಭಿಸಲಿದ್ದೇನೆ ಮತ್ತು ಮೊದಲ ಹಂತದಲ್ಲಿ ಬಿಟ್ಟು ಹೋಗಿರುವ ಸ್ಥಳಗಳಿಗೆ ಭೇಟಿ ನೀಡಲಿದ್ದೇನೆ ಎಂದು ಅವರು ನುಡಿದರು.
ಅವರು ತಮ್ಮ ಮೊದಲ ಹಂತದ ವಿಕಾಸ ಯಾತ್ರೆಯನ್ನು ಜನವರಿ 20ರಂದು ಪಶ್ಚಿಮ ಚಂಪಾರಣ್ ಜಿಲ್ಲೆಯ ಪಟಿಲಾರ್ ಗ್ರಾಮದಿಂದ ಆರಂಭಿಸಿದ್ದರು. ಆದರೆ ಚುನಾವಣಾ ಘೋಷಣೆಯಾದ ಹಿನ್ನೆಲೆಯಲ್ಲಿ ಯಾತ್ರೆಯನ್ನು ಮೊಟಕುಗೊಳಿಸಿದ್ದರು.
"ದೆಹಲಿಯು ಈ ಹಿಂದೆ ತನ್ನ ಬೇಡಿಕೆಗಳಿಗೆ ಒಪ್ಪಿಗೆ ನೀಡಿತ್ತು. ಇದೀಗ ಕಾಂಗ್ರೆಸ್ ಕೇಂದ್ರದಲ್ಲಿ ಸರ್ಕಾರ ರಚಿಸುತ್ತಿದ್ದು, ಅದು ತನ್ನ ಭರವಸೆಯನ್ನು ಈಡೇರಿಸಿ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು" ಎಂದು ಒತ್ತಾಯಿಸಿದರು. ಮಾಜಿ ಸಚಿವರಾದ ಬಿಹಾರದ ಲಾಲೂಪ್ರಸಾದ್ ಯಾದವ್ ಹಾಗೂ ರಾಮ್‌ವಿಲಾಸ್ ಪಾಸ್ವಾನ್ ಅವರನ್ನು ಹೆಸರಿಸದೆಯೇ ಟೀಕಿಸಿದ ನಿತೀಶ್, "ಕಳೆದ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದವರು ತಮ್ಮ ಈ ಅವಕಾಶವನ್ನು ರಾಜ್ಯದ ಅಭಿವೃದ್ದಿಗೆ ಬಳಸಿಕೊಳ್ಳುವುದು ಬಿಟ್ಟು, ತನ್ನ ಸರ್ಕಾರದ ಕಾರ್ಯವನ್ನು ಟೀಕಿಸಿದರು. ಆದಕ್ಕಾಗಿ ಅವರು ಸೂಕ್ತ ಬೆಲೆ ತೆರಬೇಕಾಯಿತು, ಅವರು ಜನರಿಂದ ತಿರಸ್ಕರಿಸಲ್ಪಟ್ಟರು" ಎಂಬುದಾಗಿ ವಿಶ್ಲೇಷಿಸಿದ್ದಾರೆ.
ತಾನು ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದ ಅಭಿವೃದ್ಧಿಯ ರೂಪುರೇಷೆಯನ್ನು ತಿಳಿಸಿದ್ದು, ಇದನ್ನು ನಿಜವಾಗಿಸಲು ಕೇಂದ್ರದ ಸಹಾಯ ಕೋರಿರುವುದಾಗಿ ನಿತೀಶ್ ತಿಳಿಸಿದರು. |