ದೆಹಲಿ ಸಮೀಪದ ಎಂಜೀನಿಯರಿಂಗ್ ಕಾಲೇಜೊಂದರಲ್ಲಿ ರ‌್ಯಾಗಿಂಗ್ ನಡೆದಿರುವ ಮತ್ತೊಂದು ಹೇಯ ಪ್ರಕರಣ ಬಯಲಿಗೆ ಬಂದಿದೆ.
21ರ ಹರೆಯ ಬಿ-ಟೆಕ್ ವಿದ್ಯಾರ್ಥಿ ಮೊಹಮ್ಮದ್ ವಾಸಿಮ್ ಎಂಬಾತನನ್ನು ಆತನ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಕಬ್ಬಿಣದ ರಾಡಿನಿಂದ ಅಮಾನುಷವಾಗಿ ತಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ ಎನ್ನಲಾಗಿದೆ. ಈ ಘಟನೆಯಿಂದ ಮೊಹಮ್ಮದ್ ಹಾಗೂ ಆತನ ಮನೆಯವರು ಆಘಾತಕ್ಕೀಡಾಗಿದ್ದಾರೆ.
25 ಮಂದಿ ಬಲವಂತದಿಂದ ನುಗ್ಗಿ ನನ್ನ ಮೇಲೆ ಹಲ್ಲೆ ನಡೆಸಿದರು ಎಂಬುದಾಗಿ ಬಲಿಪಶು ವಿದ್ಯಾರ್ಥಿ ಹೇಳುತ್ತಾನೆ.
ಆತ ಕಲಿಯುವುದು ಬೇಡ. ಆತ ಜೀವಂತವಿದ್ದರೆ ಸಾಕು, ಆತ ಕೂಲಿಮಾಡಿ ಬದುಕುತ್ತಾನೆ ಎಂಬುದಾಗಿ ಆತನ ನೊಂದ ತಂದೆ ಹೇಳುತ್ತಾರೆ.
ಕಳೆದೊಂದು ವರ್ಷದಿಂದ ತಾನು ಹಿರಿಯ ವಿದ್ಯಾರ್ಥಿಗಳ ಕಿರುಕುಳ ಅನುಭವಿಸುತ್ತಿದ್ದು, ತನ್ನ ಹೆತ್ತವರು ಶಾಲಾ ಆಡಳಿತಕ್ಕೆ ಅಧಿಕೃತ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಸಿಮ್ ದೂರಿದ್ದಾನೆ.
ಪೊಲೀಸರು ಇದೀಗ ಎಫ್ಐಅರ್ ದಾಖಲಿಸಿದರೂ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಸಂಶಯವಿದೆ. ಕಾಲೇಜು ಇದೀಗ ಒಂಬತ್ತು ವಿದ್ಯಾರ್ಥಿಗಳನ್ನು ಅಮಾನತ್ತುಗೊಳಿಸಿದೆ.
ಇತ್ತೀಚೆಗಷ್ಟೆ ಕೆಲವು ರ‌್ಯಾಗಿಂಗ್ ಪ್ರಕರಣಗಳು ರಾಷ್ಟ್ರವನ್ನು ತಲ್ಲಣಗೊಳಿಸಿದ್ದು, ಇಂತಹ ಪ್ರಕರಣಗಳಿಗೆ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು.
ರ‌್ಯಾಗಿಂಗ್ ತಡೆಗೆ ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿದೆ. ಯುಜಿಸಿಯೂ ಸಹ ರ‌್ಯಾಗಿಂಗ್ ವಿರೋಧಿ ನಿಯಂತ್ರಣವನ್ನು ಅಂತಿಮ ಗೊಳಿಸಿದೆ. ಇಷ್ಟಾದರೂ ಮತ್ತೆಮತ್ತೆ ಇಂತಹ ಘಟನೆಗಳು ಮರುಕಳುಸಿತ್ತುರುವುದು ಕಳವಳಕಾರಿಯಾಗಿದೆ. |