ರಾಜ್ಯದ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಹಾಗೂ ಜೈರಾಮ್ ರಮೇಶ್ ಅವರುಗಳು ಗುರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಮಾಡಿದರೆ, ಜೈರಾಮ್ ರಮೇಶ್ ಅವರು ಸ್ವತಂತ್ರ ನಿರ್ವಹಣೆಯ ರಾಜ್ಯಖಾತೆ ಹಾಗೂ ಕೆ.ಎಚ್ ಮುನಿಯಪ್ಪ ಅವರು ರಾಜ್ಯಖಾತೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎಲ್ಲಾ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.
ಜೈರಾಮ್ ರಮೇಶ್ ಕರ್ನಾಟಕದವರು. ಆದರೆ ಅವರು ಆಂಧ್ರಪ್ರದೇಶದ ರಾಜ್ಯಸಭಾ ಸದಸ್ಯರಾಗಿರುವ ಕಾರಣ ಅವರ ಅಧಿಕೃತ ಲೆಕ್ಕ ಆಂಧ್ರಪ್ರದೇಶಕ್ಕೆ. ಕರ್ನಾಟಕದವರಾಗಿರುವ ಕಾರಣ ರಾಜ್ಯದ ಲೆಕ್ಕಕ್ಕೂ ಸೇರಿಸಿಕೊಳ್ಳಲಾಗುತ್ತಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದ ಮೇ 22ರಂದು ರಾಜ್ಯದ ಇನ್ನಿಬ್ಬರು ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್ಸೆಂ ಕೃಷ್ಣ ಹಾಗೂ ವೀರಪ್ಪ ಮೊಯ್ಲಿ ಅವರು ಸಂಪುಟದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಇವರಲ್ಲಿ ಕೃಷ್ಣ ಅವರಿಗೆ ವಿದೇಶಾಂಗ ಖಾತೆ ವಹಿಸಲಾಗಿದೆ.
ಇನ್ನೋರ್ವ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಚಿವಗಿರಿಯ ಅದೃಷ್ಟ ಒಲಿದು ಬಂದಿತ್ತಾದರೂ, ಪಕ್ಷಸಂಘಟನೆಯ ಹಿನ್ನೆಲೆಯಲ್ಲಿ ಅವಕಾಶವನ್ನು ತಿರಸ್ಕರಿಸಿದ್ದಾರೆನ್ನಲಾಗಿದೆ. |