ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮನಮೋಹನ್ ಸಿಂಗ್ ಸಂಪುಟದಲ್ಲಿರುವ ಒಂಬತ್ತು ಸಚಿವರು ಅಪರಾಧಿ ಹಿನ್ನೆಲೆ ಉಳ್ಳವರಾಗಿದ್ದು, ಇವರಲ್ಲಿ ಒಬ್ಬರ ಮೇಲೆ ಗಂಭೀರ ಆರೋಪವಿದೆ ಎಂಬುದಾಗಿ ಸಚಿವರು ಚುನಾವಣೆ ಸ್ಫರ್ಧೆಯ ವೇಳೆಗೆ ಸಲ್ಲಿಸಿರುವ ಅಫಿದಾವಿತ್ ಹೇಳುತ್ತಿದೆ.
ಕಾಂಗ್ರೆಸ್‌ನ ಏಳು ಸಚಿವರ ವಿರುದ್ಧ ಅಪರಾಧಿ ಪ್ರಕರಣಗಳಿದ್ದರೆ, ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆಯ ತಲಾ ಒಬ್ಬೊಬ್ಬ ಸಚಿವರು ಅಪರಾಧಿ ಹಿನ್ನೆಲೆಯುಳ್ಳವರಾಗಿದ್ದಾರೆ.
ಸುಬೋದ್‌ಕಾಂತ್ ಸಹಾಯ, ವಾಸ್ನಿಕ್ ಮುಕುಲ್ ಬಾಲಕೃಷ್ಣ, ಅಜಯ್ ಮಕೇನ್, ಹರೀಶ್ ರಾವತ್, ಅರುಣ್ ಯಾದವ್, ಪ್ರತೀಕ್ ಪ್ರಕಾಶ್‌ಬಾಬು ಪಾಟೀಲ್, ಪ್ರದೀಪ್ ಕುಮಾರ್ ಜೈನ್ (ಕಾಂಗ್ರೆಸ್ ಸಚಿವರು), ಅಧಿಕಾರಿ ಸಿಸಿರ್ ಕುಮಾರ್ (ತೃಣ ಮೂಲ ಕಾಂಗ್ರೆಸ್) ಹಾಗೂ ಗಾಂಧಿ ಸೆಲ್ವನ್(ಡಿಎಂಕೆ) ಇವರುಗಳು ತಮ್ಮ ವಿರುದ್ಧ ಅಪರಾಧಿ ಪ್ರಕರಣವಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಅಧಿಕಾರಿ ಸಿಸಿರ್ ಕುಮಾರ್ ಅವರು ತನ್ನ ವಿರುದ್ಧ ಕಳ್ಳತನದ ಪ್ರಕರಣ ಬಾಕಿ ಇದೆ ಎಂದು ಹೇಳಿದ್ದಾರೆ. ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಮತ್ತು ನ್ಯಾಶನಲ್ ಇಲೆಕ್ಷನ್ ವಾಚ್ ಸಂಸ್ಥೆಯು ಮಂತ್ರಿಗಳು ಚುನಾವಣೆ ವೇಳೆ ಸಲ್ಲಿಸಿರುವ ಅಫಿದಾವಿತ್‌ಗಳನ್ನು ವಿಶ್ಲೇಷಿಸಿ ಈ ವಿಚಾರವನ್ನು ಹೊರಗೆಡಹಿದೆ.
ಇದೇವೇಳೆ 79 ಸದಸ್ಯತ್ವದ ಮಂತ್ರಿ ಮಂಡಲದಲ್ಲಿ 47 ಕೋಟ್ಯಾಧೀಶರಿದ್ದಾರೆ. ಇವರಲ್ಲಿ 38 ಮಂದಿ ಕಾಂಗ್ರೆಸ್, ಐದು ಡಿಎಂಕೆ ಹಾಗೂ ಇಬ್ಬರು ಎನ್‌ಸಿಪಿ ಮತ್ತು ಜೆಕೆಎನ್ ಮತ್ತು ತೃಣಮೂಲ ಕಾಂಗ್ರೆಸ್‌ನ ತಲಾ ಒಬ್ಬರು ಸಚಿವರು ಕರೋಡ್‌ಪತಿಗಳು.
ಇವರಲ್ಲಿ ಸ್ವತಂತ್ರ ನಿರ್ವಹಣೆಯ ರಾಜ್ಯಖಾತೆ ಸಚಿವರಾಗಿರುವ ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರು ಅತಿ ಹೆಚ್ಚು ಅಂದರೆ, 89.9 ಕೋಟಿ ಘೋಷಣೆ ಮಾಡಿದ್ದಾರೆ. ಪಾಟಿಯಾಲದ ಪ್ರಣೀತ್ ಕೌರ್(ಕಾಂಗ್ರೆಸ್) 42.3 ಕೋಟಿ ಘೋಷಿಸಿದ್ದು ದ್ವಿತೀಯ ಸ್ಥಾನದಲ್ಲಿದ್ದಾರೆ. ತೃತೀಯ ಸ್ಥಾನ ಕಾಂಗ್ರೆಸ್‌ನ ಕಪಿಲ್ ಸಿಬಾಲ್ ಅವರದ್ದು. ಅವರು 31.9 ಕೋಟಿ ಆಸ್ತಿಯ ಒಡೆಯ. |