ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಅವರನ್ನು ಶುಕ್ರವಾರ ತಮಿಳ್ನಾಡಿನ ಉಪಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿ ಕರುಣಾನಿಧಿ ಅವರ ಶಿಫಾರಸಿಗನುಗುಣವಾಗಿ ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲ ಅವರು ಸ್ಟಾಲಿನ್‌ರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಿರುವುದನ್ನು ಘೋಷಿಸಿದ್ದಾರೆ.ರಾಜ್ಯಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯಾಡಳಿತ ಸಚಿವರಾಗಿದ್ದ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿರುವುದು ಮುಖ್ಯಮಂತ್ರಿ ಸ್ಥಾನದತ್ತ ಅವರ ಹಾದಿಯನ್ನು ಇನ್ನಷ್ಟು ಸುಗಮವಾಗಿಸಿದೆ.ಸುಮಾರು 30 ವರ್ಷಗಳಿಗೂ ಅಧಿಕ ಕಾಲದಿಂದ ರಾಜಕೀಯದಲ್ಲಿರುವ ಸ್ಟಾಲಿನ್ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದ ಶಾಸಕರಾಗಿದ್ದಾರೆ.ತಮ್ಮ ತಂದೆಯ ಉತ್ತರಾಧಿಕಾರಿಯಾಗಲು ಎಂ.ಕೆ. ಅಳಗಿರಿ ಹಾಗೂ ಸ್ಟಾಲಿನ್ ನಡುವೆ ಸ್ಫರ್ಧೆ ಏರ್ಪಟ್ಟಿತ್ತು. ಅಳಗಿರಿ ಗುರುವಾರ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಲಭಿಸಿದೆ.ತನ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ನೇಮಕ ಮಾಡಿರುವುದಾಗಿ ಕರುಣಾನಿಧಿ ಹೇಳಿದ್ದಾರೆ. ಅವರು ಇತ್ತೀಚೆಗೆ ಬೆನ್ನಿನ ಶಸ್ತ್ರಕ್ರಿಯೆಗೊಳಗಾಗಿದ್ದರು.ಚಾಣಕ್ಷಮತಿಯಾಗಿರುವ ಕರುಣಾನಿಧಿ ತನ್ನ ಪ್ರೀತಿಯ ಪುತ್ರ, ಉತ್ತಮ ಸಂಘಟಕನೆಂಬ ಖ್ಯಾತಿಪಡೆದಿರುವ ಸ್ಟಾಲಿನ್‌ಗೆ ರಾಜ್ಯದಲ್ಲಿ ಪಕ್ಷದ ನೇತೃತ್ವ ವಹಿಸಿದ್ದಾರೆ. ಅಂತೆಯೇ ಇನ್ನೋರ್ವ ಪುತ್ರ ಅಳಗಿರಿ ಹಾಗೂ ಸೋದರಳಿಯ ದಯಾನಿಧಿ ಮಾರನ್ ಅವರನ್ನು ಕೇಂದ್ರದಲ್ಲಿ ಪಕ್ಷದ ಪ್ರತಿನಿಧಿಗಳಾಗಿದ್ದಾರೆ. ಆದರೆ ಪುತ್ರಿ ಕನಿಮೊಳಿಗಾಗಿ ಯಾವ ಯೋಜನೆ ಎಂಬುದು ಗೊತ್ತಾಗಿಲ್ಲ. ಕನಿಮೊಳಿಗೂ ಸಂಪುಟ ದರ್ಜೆ ಸಚಿವಸ್ಥಾನಕ್ಕಾಗಿ ಡಿಎಂಕೆ ಭಾರೀ ಪ್ರಯತ್ನ ಮಾಡಿತ್ತು. ಆದರೆ ಕಾಂಗ್ರೆಸ್ ಮೂರು ಸಂಪುಟ ಸ್ಥಾನ ನೀಡುವ ತನ್ನ ನಿಲುವಿಗೆ ಅಂಟಿಕೊಂಡ ಕಾರಣ ರಾಜ್ಯಸಭಾ ಸದಸ್ಯೆಯಾಗಿರುವ ಕನಿಮೊಳಿಗೆ ಸಚಿವ ಸ್ಥಾನ ತಪ್ಪಿಹೋಗಿದೆ. |