ಮುಂದಿನವಾರದಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಅವರು ಭಾರತಕ್ಕೆ ಭೇಟಿನೀಡಲಿದ್ದು, ಈ ಸಂದರ್ಭದಲ್ಲಿ ಲಂಕಾಸೇನೆ ಹಾಗೂ ಎಲ್‌ಟಿಟಿಇ ನಡುವಿನ ಕಾಳಗದಿಂದಾಗಿ ನಿರಾಶ್ರಿತರಾಗಿರುವ ತಮಿಳರ ಪುನರ್ವಸತಿ ಕುರಿತು ಚರ್ಚಿಸಬಹುದೆಂಬ ಆಶಾಭಾವನೆಯನ್ನು ಭಾರತ ಹೊಂದಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಹೇಳಿದ್ದಾರೆ.ಮಾತುಕತೆಗಳನ್ನು ಮುಂದುವರಿಸಲು ನಾವು ಶ್ರೀಲಂಕಾ ಅಧ್ಯಕ್ಷರ ಬರುವಿಕೆಯನ್ನು ಕಾಯುತ್ತಿದ್ದೇವೆ ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ." ಬಿಕ್ಕಟ್ಟು ಅಂತ್ಯಗೊಂಡಿದೆ. ನಿರಾಶ್ರಿತರಾಗಿರುವ ತಮಿಳರ ಪುನಶ್ಚೇತನ ಕಾರ್ಯ ಆರಂಭಗೊಂಡಿದೆಯಷ್ಟೆ. ನಿರಾಶ್ರಿತರಾಗಿರುವ ಸಾವಿರಾರು ಮಂದಿಯ, ಅದರಲ್ಲೂ ಬಹುಸಂಖ್ಯಾತ ತಮಿಳರನ್ನೇ ಒಳಗೊಂಡಿರುವ ಸಮುದಾಯದ ಪುನರ್ವಸತಿ ಒಂದು ದೈತ್ಯ ಯೋಜನೆ" ಎಂಬುದಾಗಿ ಸಚಿವರು ನುಡಿದರು.ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣ್ ಅವರು ರಾಜಪಕ್ಷೆ ಅವರನ್ನು ಇತ್ತಿಚೆಗೆ ಭೇಟಿದ್ದು ಅವರಿಗೆ ಕೆಲವು ಭರವಸೆಗಳನ್ನು ನೀಡಲಾಗಿದೆ ಎಂದು ಕೃಷ್ಣ ತಿಳಿಸಿದರು.ನೇಪಾಳದ ಕುರಿತು ವಿದೇಶಾಂಗ ನೀತಿಯನ್ನು ಮರುಪರಿಶೀಲನೆ ಮಾಡಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಂತಹ ಅವಶ್ಯಕತೆಯನ್ನು ಅವರು ತಳ್ಳಿಹಾಕಿದರು. ಮರುಪರಿಶೀಲನೆಯ ಪ್ರಶ್ನೆಯೇ ಇಲ್ಲ. ನಾವು ನೇಪಾಳದೊಂದಿಗೆ ಸ್ನೇಹಪೂರ್ವಕ ಸಂಬಂಧ ಹೊಂದಿದ್ದೇವೆ. ನೇಪಾಳದೊಂದಿಗಿನ ನಮ್ಮ ಸಂಬಂಧ ಭದ್ರ ಬುನಾದಿ ಹೊಂದಿದೆ ಎಂದು ವಿದೇಶಾಂಗ ಸಚಿವರು ನುಡಿದರು.ಇದಲ್ಲದೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ಮುಂದಿನ ತಿಂಗಳು ಆಗಮಿಸಲಿದ್ದಾರೆ. ಈ ವೇಳೆ ಅನೇಕ ದ್ವಿಪಕ್ಷೀಯ ವಿಚಾರಗಳ ಕುರಿತು ಚರ್ಚಿಸಲಾಗುವುದು" ಎಂದು ಅವರು ತಿಳಿಸಿದರು.ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ತವರೂರಿಗೆ ಆಗಮಿಸಿದ ಕೃಷ್ಣ ಅವರಿಗೆ ಅವರ ಅಭಿಮಾನಿಗಳು ಅದ್ಧೂರಿಯ ಸ್ವಾಗತ ಕೋರಿದರು. |