ಹಿಂದಿನ ಕಾನೂನು ಸಚಿವ ಎಚ್.ಆರ್. ಭಾರದ್ವಾಜ್ ಅವರು ಹೊಂದಿದ್ದ ನಿಲುವಿಗೆ ತದ್ವಿರುದ್ಧವಾದ ಕ್ರಮಕ್ಕೆ ಹೊಸ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ ಮುಂದಾಗಿದ್ದಾರೆ. ಕಲ್ಕತಾ ಹೈಕೋರ್ಟಿನ ನ್ಯಾಯಾಧೀಶ ಸೌಮಿತ್ರ ಸೇನ್ ಅವರ ವಿರುದ್ಧದ ವಾಗ್ದಂಡನೆ ಪ್ರಕರಣವನ್ನು ತ್ವರಿತಗೊಳಿಸುವುದಾಗಿ ಮೊಯ್ಲಿ ಹೇಳಿದ್ದಾರೆ.
ಇದರೊಂದಿಗೆ ನ್ಯಾಯಾಧೀಶರ ವಿಚಾರಣಾ ಮಸೂದೆಯನ್ನು ಕಾಯ್ದೆಯಾಗಿಸುವುದಾಗಿಯೂ ಅವರು ಹೇಳಿದ್ದು, ಇದು ನ್ಯಾಯಾಂಗದಲ್ಲಿ ಭ್ರಷ್ಟಾಚಾರವನ್ನು ತಡೆಯಲು ಯುಪಿಎಯ ಪ್ರಯತ್ನದ ಸ್ಪಷ್ಟ ಸುಳಿವು ನೀಡಲಿದೆ.
"ನ್ಯಾಯಾಧೀಶರೊಬ್ಬರಿಗೆ ಛೀಮಾರಿ ಹಾಕುವ ಪ್ರಪ್ರಥಮ ಘಟನೆ ಹಾಗೂ ದುರ್ವತನೆ ತೋರುವ ನ್ಯಾಯಾಧೀಶರ ತನಿಖೆಗೆ ಹಾದಿ ಸುಗಮಗೊಳಿಸುವ ನ್ಯಾಯಾಧೀಶರ ತನಿಖಾ ಕಾಯ್ದೆ ಜಾರಿಯು, ನಾವು ಏನು ಮಾಡಬೇಕೆಂದಿದ್ದೇವೆ ಎಂಬ ಸೂಚನೆಯನ್ನು ನೀಡುತ್ತದೆ" ಎಂದು ಮೊಯ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
"ಇಂತಹ ಘಟನೆಯು ಹಿಂದೆಂದೂ ನಡೆದಿರದಿದ್ದರೂ, ನ್ಯಾಯಾಧೀಶರ ವಿರುದ್ಧದ ಪ್ರಕ್ರಿಯೆಯು ಸಂಪೂರ್ಣಗೊಂಡಾಗ ವಾಗ್ದಂಡನೆ ಪ್ರಕ್ರಿಯೆ ಕುರಿತ ವಿಶ್ವಾಸಾರ್ಹತೆ ಮರುಸ್ಥಾಪನೆಗೊಳ್ಳುತ್ತದೆ" ಎಂದು ಅವರು ಸೇನ್ ವಿರುದ್ಧದ ವಾಗ್ದಂಡನೆ ಪ್ರಕರಣವನ್ನು ಪ್ರಸ್ತಾಪಿಸಿ ನುಡಿದರು. ಈ ಪ್ರಕರಣವು ರಾಜ್ಯಸಭೆಯಲ್ಲಿ ಬಾಕಿಇದ್ದು, ಈ ವಿಚಾರವನ್ನು ಸದ್ಯವೇ ರಾಜ್ಯಸಭಾ ಅಧ್ಯಕ್ಷರೊಂದಿಗೆ ಚರ್ಚಿಸುವುದಾಗಿ ಅವರು ನುಡಿದರು.
ಹಣಕಾಸು ದುರ್ಬಳಕೆ ಮಾಡಿರುವ ಸೇನ್ ವಿರುದ್ಧ ವಾಗ್ದಂಡನೆ ಹೇರುವಂತೆ, ಕಾಂಗ್ರೆಸ್ ಹೊರತು ಪಡಿಸಿ ಪ್ರಮುಖ ರಾಜಕೀಯ ಪಕ್ಷಗಳ 58 ಸಂಸದರು ಫೆಬ್ರವರಿ ತಿಂಗಳಲ್ಲಿ ರಾಜ್ಯಸಭಾ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದರು.
ಮುಖ್ಯನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರಬರೆಯುವ ಮೂಲಕ ಸೇನ್ ಅವರಿಗೆ ಛೀಮಾರಿ ಹಾಕಲು ಕಳೆದ ಆಗಸ್ಟ್ ತಿಂಗಳಲ್ಲಿ ಶಿಫಾರಸ್ಸು ಮಾಡಿದ್ದರು. ಆದರೆ ಆಗಿನ ಯುಪಿಎ ಸರ್ಕಾರ ಇದನ್ನು ಕೆಳಗೆ ಹಾಕಿ ಕುಳಿತಿತ್ತು. ಅಲ್ಲದೆ ಆಗಿನ ಕಾನುನು ಸಚಿವರಾಗಿದ್ದ ಭಾರದ್ವಾಜ್ ಅವರು ಈ ಕುರಿತು ಮುಂದುವರಿಯಲು ಆಸಕ್ತವಾಗಿಲ್ಲ ಎಂದು ಹೇಳಿದ್ದರು. |