ಗುರುವಾರ ಸಂಪುಟ ವಿಸ್ತರಣೆ ಬಳಿಕ ಶನಿವಾರ ನೂತನ ಸಂಪುಟದ ಪ್ರಥಮ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಮುಂದಿನವಾರ ರಾಷ್ಟ್ರಪತಿಯವರು ಜಂಟಿ ಸದನವನ್ನುದ್ದೇಶಿಸಿ ಮಾಡಲಿರುವ ಭಾಷಣವನ್ನು ಅಂತಿಮಗೊಳಿಸಲಾಗಿದೆ.
ಹದಿನೈದನೆ ಲೋಕಸಭೆಯ ಪ್ರಥಮ ಅಧಿವೇಶನವು ಸೋಮವಾರ ಆರಂಭವಾಗಲಿದ್ದು, ಹೊಸದಾಗಿ ಆಯ್ಕೆಯಾಗಲಿರುವ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 3ರಂದು ಸ್ಪೀಕರ್ ಆಯ್ಕೆ ನಡೆಯಲಿದೆ ಮತ್ತು ಮರುದಿನದಂದು ರಾಷ್ಟ್ರಪತಿಯವರು ಜಂಟಿಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭಾಷಣ ತಯಾರಿಗೆ ಪ್ರಧಾನಿ ಮನೋಹನ್ ಸಿಂಗ್ ಅವರು ವ್ಯಾಪಕ ಶ್ರಮವಹಿಸಿದ್ದು, ಇದು ಹೊಸ ಸರ್ಕಾರದ ಕಾರ್ಯಸೂಚಿಯನ್ನು ಪ್ರಚುರ ಪಡಿಸಲಿದೆ.
ಪ್ರಧಾನಿಯವರು ಇದೀಗಾಗಲೆ ತನ್ನ ಸರ್ಕಾರದ 100ದಿನಗಳ ಕ್ರಿಯಾ ಯೋಜನೆಯ ಭರವಸೆ ನೀಡಿದ್ದಾರೆ. ಅಲ್ಲದೆ ಕಳೆದ ಯುಪಿಎ ಸರ್ಕಾರದ ಪೂರ್ಣಗೊಳ್ಳದ ಕಾರ್ಯಗಳತ್ತ, ಅದರಲ್ಲೂ ವಿಶೇಷವಾಗಿ ಮೂಲಸೌಕರ್ಯ, ಮತ್ತು ಅಭಿವೃದ್ಧಿ ವಲಯಗಳತ್ತ ಗಮನ ಹರಿಸಬಹುದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ ಆರ್ಥಿಕತೆಯ ಪ್ರಸಕ್ತ ನಿಧಾನಗತಿಯನ್ನು ಹಳಿಗೆ ತರಲು ಹೊಸ ಉತ್ತೇಜಕ ಪ್ಯಾಕೇಜುಗಳನ್ನು ಘೋಷಿಸಲಿದ್ದಾರೆ ಎಂದೂ ಹೇಳಲಾಗಿದೆ.
ಬಡಕುಟುಂಬಗಳಿಗೆ ತಿಂಗಳೊಂದರ 25 ಕೆಜಿ ಗೋಧಿ ಅಥವಾ ಅಕ್ಕಿಯನ್ನು ಒದಗಿಸುವ ಗ್ಯಾರಂಟಿಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಮತ್ತು ಭಾರತ ನಿರ್ಮಾಣ ಯೋಜನೆ, ಭಯೋತ್ಪಾದನೆಯನ್ನು ಹತ್ತಿಕ್ಕಲು ಕ್ರಮ ಹಾಗೂ ನಗರ ಉದ್ಯೋಗಗಳ ಉಪಕ್ರಮಗಳು ಪ್ರಧಾನವಾಗಿ ರಾಷ್ಟ್ರಪತಿಯವರ ಭಾಷಣದಲ್ಲಿ ಕೇಳಿಬರಲಿದೆ ಎಂದು ಮೂಲಗಳು ತಿಳಿಸಿವೆ.
ಕ್ಷಿಪ್ರ ಅಧಿವೇಶಕ್ಕೆ ಮುಂಚಿತವಾಗಿ ಸಂಸತ್ತಿನಲ್ಲಿ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ಭದ್ರತಾ ಸಿಬ್ಬಂದಿಗಳ ಸಿದ್ಧತೆಯನ್ನು ಪರಿಶೀಲಿಸಲು ಸಂಸತ್ ಭವನದಲ್ಲಿ ಭದ್ರತಾ ಕವಾಯತನ್ನು ಶನಿವಾರ ನಡೆಸಲಾಯಿತು.
ಬಜೆಟ್ ಅಧಿವೇಶನವು ಜುಲೈ ಪ್ರಥಮ ವಾರದಲ್ಲಿ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ. |