ಆಸ್ಟ್ರೇಲಿಯಾದ ವಿಶ್ವವಿದ್ಯಾನಿಯವೊಂದು ತನಗೆ ನೀಡಲುದ್ದೇಶಿಸಿದ್ದ ಗೌರವ ಡಾಕ್ಟರೇಟನ್ನು ನಿರಾಕರಿಸಿರುವ ಮೂಲಕ ಬಾಲಿವುಡ್‌ನ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಭ್ ಬಚ್ಚನ್, ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಜನಾಂಗೀಯ ಹಲ್ಲೆಗೆ ಪ್ರತಿಭಟನೆ ಸೂಚಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಮನೋರಂಜನಾ ಜಗತ್ತಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯವು 66ರ ಹರೆಯದ ಈ ಮಹಾನ್ ನಟನಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಅವರು ಈ ಹಿಂದೆ ಈ ಪದವಿ ಸ್ವೀಕರಿಸಲು ಒಪ್ಪಿಗೆಯನ್ನೂ ನೀಡಿದ್ದರು. ಆದರೆ ಇದೀಗ ಭಾರತೀಯ ವಿದ್ಯಾರ್ಥಿಗಳ ಮೇಲೆ ಸರಣಿ ಹಲ್ಲೆ ಪ್ರಕರಣಗಳು ಬೆಳಕಿಗೆ ಬಂದ ಮೇಲೆ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
"ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಸಿರುವ ಹಲ್ಲೆಯನ್ನು ಅತ್ಯಂತ ದುಃಖ ಹಾಗೂ ಆಘಾತದಿಂದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ದಿನವಿಡೀ ನೋಡುತ್ತಿದ್ದೇನೆ" ಎಂಬುದಾಗಿ ಅವರು ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ.
"ನನ್ನನ್ನು ಗೌರವಿಸಲು ಉದ್ದೇಶಿಸಿರುವ ಸಂಸ್ಥೆಯ ಮೇಲೆ ಅಗೌರವ ಎಂಬುದು ಇದರರ್ಥವಲ್ಲ. ಆದರೆ ನನ್ನ ದೇಶದ ನಾಗರಿಕರು ಎಲ್ಲಿ ಅಮಾನವೀಯವಾಗಿ ಹಲ್ಲೆಗೆ ಒಳಗಾಗುತ್ತಿದ್ದಾರೋ, ಅಂತಹ ದೇಶದಿಂದ ಗೌರವ ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ. |