ಮುಂಬೈ ದಾಳಿಕೋರ ಅಜ್ಮಲ್ ಅಮೀರ್ ಕಸಬ್‌ನ ವಿಚಾರಣೆಯಲ್ಲಿ ವಿಳಂಬದ ಬಗ್ಗೆ ತೀವ್ರ ಅಸಮಾಧಾನ ಸೂಚಿಸಿರುವ ಶಿವಸೇನಾ ಕಾರ್ಯಕಾರಿ ಅಧ್ಯಕ್ಷ ಉದ್ಭವ್ ಠಾಕ್ರೆ ಅವರು, ಕಸಬ್ ವಿರುದ್ಧದ ವಿಚಾರಣೆಯನ್ನು ನಿಲ್ಲಿಸಿ, ಕಸಬ್ ಹಾಗೂ ಸಂಸತ್ ದಾಳಿ ಆರೋಪಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿ ಎಂದು ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಶಿವಸೇನಾ ನಾಯಕರ ನಿಯೋಗವೊಂದು ಸದ್ಯವೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ತಕ್ಷಣವೇ ಅಫ್ಜಲ್ ಗುರು ಹಾಗೂ ಕಸಬ್‌ನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಲಿದೆ ಎಂಬುದಾಗಿ ಠಾಕ್ರೆ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಶಿವಸೇನೆಯು ರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಭಾ ಪಟೀಲ್ ಅವರ ಅಭ್ಯರ್ಥಿತನವನ್ನು ಬೆಂಬಲಿಸಿತ್ತು." ಭಗತ್ ಸಿಂಗ್ ಮತ್ತು ರಾಜ್‌ಗುರು ಅವರಂತೆ ಅಫ್ಜಲ್ ಗುರು ಮತ್ತು ಕಸಬ್ ಸ್ವಾತಂತ್ರ್ಯ ಹೋರಾಟಗಾರರಲ್ಲ. ಮತ್ತು ಇವರಿಗೆ ಸಂಬಂಧಿಸಿದ ಅಧ್ಯಾಯವನ್ನು ಶಾಶ್ವತವಾಗಿ ಮುಗಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.ಮಾಧ್ಯಮಗಳನ್ನೂ ತರಾಟೆಗೆ ತೆಗೆದುಕೊಂಡಿರುವ ಅವರು, ಕಸಬ್ ಏನು ತಿನ್ನಲು ಇಚ್ಚಿಸುತ್ತಾನೆ ಮತ್ತು ಆತ ನ್ಯಾಯಾಲಯದಲ್ಲಿ ಹೇಗೆ ವರ್ತಿಸಿದ ಎಂಬೆಲ್ಲ ಅನವಶ್ಯಕ ವಿಚಾರಗಳನ್ನು ವರದಿ ಮಾಡುವುದನ್ನು ಟೀಕಿಸಿದರು. |