ಖ್ಯಾತ ಮಲಯಾಳಿ ಲೇಖಕಿ ಕಮಲಾ ದಾಸ್ ಸುರಯ್ಯ(75) ಅವರು ಭಾನುವಾರ ಮುಂಜಾನೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಎಪ್ರಿಲ್ 18ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಮಲಾ ಅವರು ಮೂವರು ಪುತ್ರರನ್ನು ಅಗಲಿದ್ದಾರೆ.
ಮಲಯಾಳಿ ಹಾಗೂ ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿರುವ ಅವರ ಸಮ್ಮರ್ ಇನ್ ಕಲ್ಕತ್ತಾ, ಮೈ ಸ್ಟೋರಿ, ಅಲ್ಪಬೆಟ್ ಆಫ್ ಲಸ್ಟ್, ಮೊದಲಾದ ಕೃತಿಗಳಿಂದ ಹೆಸರು ಗಳಿಸಿದ್ದರು.
ಮೃತ ಸಾಹಿತಿ ಕಮಲಾ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಸಾಹಿತ್ಯಿ ಪ್ರಶಸ್ತಿಗಳನ್ನು ಪಡೆದಿದ್ದರು. ಇತ್ತೀಚೆಗೆ ಇಲ್ಲಿನೆಲೆಸಿದ್ದ ಅವರು ಏಕಾಂತ ಜೀವನ ಸಾಗಿಸುತ್ತಿದ್ದರು.
1934ರ ಮಾರ್ಚ್ 31ರಂದು ಜನಿಸಿದ್ದ ಕಮಲಾದಾಸ್ ಅವರು ಕಳೆದ 1999ರಲ್ಲಿ ತಮ್ಮ 65ನೆ ವಯಸ್ಸಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ಸುರಯ್ಯ ಎಂದು ಹೆಸರಿರಿಸಿಕೊಂಡಿದ್ದರು.
ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಕಮಲಾದಾಸ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಜೂನ್ ಎರಡರಂದು ಮಾಡಲಾಗುವುದು ಎಂದು ಕೇರಳದ ಸಾಂಸ್ಕೃತಿಕ ಸಚಿವ ಎಂ.ಎ. ಬೇಬಿ ಅವರು ಹೇಳಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ಪಾಲಯಂ ಜುಮಾ ಮಸೀದಿಯಲ್ಲಿ ನಡೆಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಿಳಿಸಿದರು.
ಸೋಮವಾರ ಅವರ ಮೃತದೇಹವನ್ನು ನೆಡುಂಬಸ್ಸೆರಿಗೆ ವಿಮಾನದಲ್ಲಿ ತರಲಾಗುವುದು ಮತ್ತು ಆಳಪುಜಾ ಹಾಗೂ ಕೊಲ್ಲಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗುವುದು.
ಕಮಲಾ ಅವರ ಇಚ್ಚೆಯಂತೆ ಮುಸ್ಲಿಂ ಧರ್ಮದ ವಿಧಿವಿಧಾನಗಳಿಗನುಗುಣವಾಗಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. |