ಹದಿನೈದನೇ ಲೋಕಸಭಾ ಸ್ಪೀಕರ್ ಆಗಿ ಕಾಂಗ್ರೆಸ್‌ನ ಆಯ್ಕೆಯಾಗಿರುವ ಮೀರಾ ಕುಮಾರ್ ಅವರು ತಮ್ಮ ಸಚಿವೆ ಸ್ಥಾನಕ್ಕೆ ಭಾನುವಾರ ತಡರಾತ್ರಿ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸ್ಪೀಕರ್ ಸ್ಥಾನಕ್ಕೆ ಅವರ ಹಾದಿ ಸುಗಮವಾಗಿದೆ. ದಲಿತ ಮಹಿಳೆಯೂ ಆಗಿರುವ ಮೀರಾ ಕುಮಾರ್ ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಎಂಬುದಾಗಿ ಇತಿಹಾಸದಲ್ಲಿ ದಾಖಲಾಗಲಿದ್ದಾರೆ.ಮೇ 22 ರಂದು ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದಂದು ಮೀರಾ ಕುಮಾರ್ ಅವರೂ ಸಂಪುಟ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿತ್ತು. ಇದೀಗ ಅವರು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತನ್ನ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಮೀರಾ ಅವರ ರಾಜೀನಾಮೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯನ್ವಯ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸ್ವೀಕರಿಸಿದ್ದಾರೆ. ಬದಲೀ ವ್ಯವಸ್ಥೆಯಾಗುವ ತನಕ ಪ್ರಧಾನಿ ಅವರೇ ಜಲಸಂಪನ್ಮೂಲ ಖಾತೆಯನ್ನು ಹೊಂದಲಿದ್ದಾರೆ. ಪ್ರತಿಭಾ ಪಾಟೀಲ್ ಅವರನ್ನು ಪ್ರಥಮ ರಾಷ್ಟ್ರಪತಿಯನ್ನಾಗಿಸಿದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಇದೀಗ ಮೀರಾ ಕುಮಾರ್ ಅವರನ್ನು ಸ್ಪೀಕರ್ ಆಗಿಸುವ ಮೂಲಕ ಮತ್ತೊಂದು ದಾಖಲೆ ಮೂಡಿಸಿದೆ. ಮಹಿಳಾಸ್ಪೀಕರ್: ಇತಿಹಾಸ ಬರೆಯಲಿರುವ ಮೀರಾಕುಮಾರ್ |