ಜಾರ್ಖಂಡ್ ಬುಡಕಟ್ಟು ನಾಯಕ ಕರಿಯಾ ಮುಂಡ ಅವರನ್ನು ಬಿಜೆಪಿಯು ಲೋಕಸಭೆಯ ಉಪಸಭಾಪತಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ರೂಢಿಯಂತೆ ಉಪಸಭಾಪತಿ ಸ್ಥಾನವನ್ನು ಪ್ರಮುಖ ವಿರೋಧ ಪಕ್ಷಕ್ಕೆ ನೀಡಲಾಗುವುದು ಎಂಬ ಸರ್ಕಾರದ ಪ್ರಸ್ತಾಪ ಬಳಿಕ ಬಿಜೆಪಿಯ ಕೇಂದ್ರೀಯ ಸಂಸದೀಯ ಮಂಡಳಿಯ ಸಭೆಯಲ್ಲಿ ಮುಂಡಾರನ್ನು ಆಯ್ಕೆ ಮಾಡಲಾಗಿದೆ.
ಆರು ಬಾರಿ ಸಂಸದರಾಗಿರುವ ಕರಿಯಾ ಮುಂಡಾ ಅವರನ್ನು ಉಪಸಭಾಪತಿ ಸ್ಥಾನಕ್ಕೆ ಪಕ್ಷದ ಸಂಸದೀಯ ಮಂಡಳಿ ಆಯ್ಕೆ ಮಾಡಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಹೇಳಿದ್ದಾರೆ.
ಮೊರಾರ್ಜಿ ದೇಸಾಯಿ ಸರ್ಕಾರ ಹಾಗೂ ವಾಜಪೇಯಿ ಸಂಪುಟದಲ್ಲಿ 72ರ ಹರೆಯದ ಮುಂಡಾ ಅವರು ಸಚಿವರಾಗಿದ್ದರು. ಇದಕ್ಕೂ ಮೊದಲು ಅವರು ಬಿಹಾರದಿಂದ ಬಳಿಕ ಜಾರ್ಖಂಡ್‌ನ ಶಾಸಕರಾಗಿದ್ದರು.
ಪಕ್ಷವು ಬುಡಕಟ್ಟು ಜನಾಂಗದ ಬೆಂಬಲ ಗಳಿಸಲು ಈ ನಿರ್ಧಾರ ಕೈಗೊಂಡಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜೇಟ್ಲಿ "ಮುಂಡಾ ಅವರು ಪರಿಶಿಷ್ಟ ವರ್ಗಕ್ಕೆ ಸೇರಿರುವುದು ಹೌದಾದರೂ, ಅವರ ಹಿರಿತನವನ್ನು ಪರಿಗಣಿಸಿ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಮುಂಡಾ ಅವರಿಗೆ ವಿಸ್ತೃತವಾದ ಶಾಸನಾತ್ಮಕ ಅನುಭವವಿದೆ" ಎಂದು ನುಡಿದರು. |