ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಯುಪಿಎ ಆಯ್ಕೆಮಾಡಿರುವ ಅಭ್ಯರ್ಥಿ ಮೀರಾ ಕುಮಾರ್ ಅವರು, ಸ್ಪೀಕರ್ ಸ್ಥಾನಕ್ಕೆ ತನ್ನ ನಾಮನಿರ್ದೇಶನವು ಒಂದು ಐತಿಹಾಸಿಕ ಹಾಗೂ ಭಾವಪರವಶತೆಯ ಕ್ಷಣ ಎಂದು ಬಣ್ಣಿಸಿದ್ದಾರೆ. ಅವರು ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ಅದೊಂದು ಐತಿಹಾಸಿಕ ಕ್ಷಣ. ಅದು ನನಗೆ ಅತ್ಯಂತ ಭಾವುಕ ಕ್ಷಣ" ಎಂದು ಐದು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಮೀರಾಕುಮಾರ್ ಹೇಳಿದ್ದಾರೆ.
ಎಲ್ಲ ಪಕ್ಷಗಳ ನಾಯಕರು ತಮ್ಮ ಹೆಸರನ್ನು ಈ ಪ್ರಮುಖ ಹುದ್ದಗೆ ತನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ ಎಂದು ಅವರು ನುಡಿದರು. "ಒಬ್ಬ ಮಹಿಳೆಯನ್ನು ಅತ್ಯುನ್ನತ ಹುದ್ದೆಗೆ ಪರಿಗಣಿಸಿರುವುದು ಒಂದು ಐತಿಹಾಸಿಕ ಕ್ಷಣ" ಎಂದು ಮೀರಾ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
64ರ ಹರೆಯದ ಮೀರಾ ಕುಮಾರ್ ಮಾಜಿ ಉಪಪ್ರಧಾನಿ ಜಗಜೀವನ್ ರಾಮ್ ಅವರ ಪುತ್ರಿ. ಐಎಫ್ಎಸ್ ಸೇವೆಯಲ್ಲಿದ್ದ ಅವರು ರಾಜಕೀಯಕ್ಕೆ ಸೇರುವ ಸಲುವಾಗಿ 1985ರಲ್ಲಿ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮೆದು ಮಾತಿನ ಮೀರಾ ಅವರು ಪಿ.ವಿ. ನರಸಿಂಹ ರಾವ್ ಸಂಪುಟದಲ್ಲಿ ಸಹಾಯಕ ಸಚಿವರಾಗಿದ್ದರು. ಕಳೆದ ಬಾರಿಯ ಯುಪಿಎ ಸರ್ಕಾರದಲ್ಲಿ ಅವರು ಸಂಪುಟ ದರ್ಜೆ ಸಚಿವರಾಗಿದ್ದರು.
ಯುಪಿಎ ಸರ್ಕಾರದ ಎರಡನೇ ಅವಧಿಗೆ ಜಲಸಂಪನ್ಮೂಲ ಸಚಿವೆಯಾಗಿ ಅಧಿಕಾರ ವಹಿಸಿದ ಎರಡು ದಿನಗಳಲ್ಲೇ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸಲಾಗಿತ್ತು. ಸಭಾಪತಿ ಸ್ಥಾನಕ್ಕೆ ಪಕ್ಷವು ಆಯ್ಕೆ ಮಾಡಿದ ಬಳಿಕ ಮೀರಾ ಕುಮಾರ್ ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಮೀರಾ ಕುಮಾರ್ ಹೆಸರು ನಾಮನಿರ್ದೇಶನ ಮಾಡಲಾಗಿದೆ. ಬುಧವಾರ ಚುನಾವಣೆ ನಡೆಯಲಿದೆ. |