ಮುಂಬೈ ದಾಳಿಯ ರೂವಾರಿ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್‌ನನ್ನು ಬಿಡುಗಡೆ ಮಾಡಿರುವುದು, ನರಮೇಧದ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರುವಲ್ಲಿ ಪಾಕಿಸ್ತಾನ ಗಂಭೀರವಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂಬುದಾಗಿ ಭಾರತ ಟೀಕಿಸಿದೆ.
"ಮುಂಬೈದಾಳಿಯ ರೂವಾರಿಗಳನ್ನು ಕಾನೂನಿನ ಕಟಕಟೆಗೆ ತರುವಲ್ಲಿ ಪಾಕಿಸ್ತಾನವು ಗಂಭೀರತೆ ಹಾಗೂ ಬದ್ಧತೆಯನ್ನು ತೋರಿಲ್ಲ ಎಂಬುದು ನಮ್ಮನ್ನು ಅಸಂತುಷ್ಟಗೊಳಿಸಿದೆ" ಎಂಬುದಾಗಿ ಗೃಹಸಚಿವ ಪಿ. ಚಿದಂಬರಂ ದೂರಿದ್ದಾರೆ. ಆದರೆ ಇದು ಭಾರತದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದಾಗಿ ಸಚಿವರು ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಜೆಯುಡಿಯನ್ನು ನಿಷೇಧಿಸಿದ ಬಳಿಕ ಕಳೆದ ಡಿಸೆಂಬರ್ 11ರಂದು ಸಯೀದ್‌ನನ್ನು ಪಾಕಿಸ್ತಾನವು ಗೃಹ ಬಂಧನದಲ್ಲಿರಿಸಿತ್ತು. ಜೆಯುಡಿಯು ಮುಂಬೈ ದಾಳಿ ನಡೆಸಿರುವ ಲಷ್ಕರೆ ಸಂಘಟನೆಯ ಇನ್ನೊಂದು ಮುಖ ಎಂದು ವಿಶ್ವಸಂಸ್ಥೆ ಹೇಳಿದೆ. ಮುಂಬೈ ದಾಳಿಗೆ ಲಷ್ಕರೆ ಕಾರಣ ಎಂಬುದಾಗಿ ಭಾರತ ಆರೋಪಿಸಿದೆ.
ಪಾಕಿಸ್ತಾನವು ಸಯೀದ್ ವಿರುದ್ಧ ಯಾವುದೇ ಬಲವಾದ ಆರೋಪಗಳನ್ನು ಮಂಡಿಸಿಲ್ಲ ಎಂದು ಭಾರತ ದೂರಿದೆ. ಇದರಿಂದಾಗಿ ಬಲವಾದ ಪುರಾವೆ ಇಲ್ಲದ ಕಾರಣ ಲಾಹೋರ್ ಹೈಕೋರ್ಟ್ ಸಯೀದ್‌ನನ್ನು ಬಿಡುಗಡೆ ಮಾಡಿದೆ ಎಂದು ಭಾರತ ಅಭಿಪ್ರಾಯಿಸಿದೆ. |