ತಮಿಳು ಭಾಷೆ ಹಾಗೂ ಸಂಸ್ಕ್ರತಿಗೆ ಪ್ರೋತ್ಸಾಹ ನೀಡಲು ಸರಕಾರ ಯೋಜನೆಯೊಂದನ್ನು ನಾಳೆ ಆರಂಭಿಸಲಾಗುತ್ತಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ತಮಿಳು ಹೆಸರನ್ನು ನಾಮಕರಣ ಮಾಡಿದಲ್ಲಿ ಚಿನ್ನದ ಉಂಗುರ ನೀಡಲಾಗುವುದು ಎಂದು ಮೇಯರ್ ಸುಬ್ರಮಣ್ಯಂ ಹೇಳಿದ್ದಾರೆ . ಮುಖ್ಯಮಂತ್ರಿ ಕರುಣಾನಿಧಿಯವರ 86 ನೇ ಹುಟ್ಟುಹಬ್ಬದ ದಿನದಂದು ಯೋಜನೆಯನ್ನು ಆರಂಭಿಸಲಾಗುವುದು ಎಂದು ಮೇಯರ್ ಸುಬ್ರಮಣ್ಯಂ ಸುದ್ದಿಗಾರರಿಗೆ ತಿಳಿಸಿದ್ದಾರೆ
ಮಗು ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ ದಾಖಲೆ ಪತ್ರಗಳನ್ನು ಅಧಿಕಾರಿಗಳು ಸಲ್ಲಿಸಿದ 15 ದಿನದೊಳಗೆ ಒಂದು ಗ್ರಾಂ ಚಿನ್ನದ ಉಂಗುರವನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಕರುಣಾನಿಧಿಯವರು ತಮಿಳು ಭಾಷೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 70 ವರ್ಷಗಳಿಂದ ಹಗಲಿರಳು ಶ್ರಮಿಸುತ್ತಿದ್ದು, ಅವರ ಗೌರವಾರ್ಥವಾಗಿ ಕಾರ್ಪೋರೇಶನ್ ಯೋಜನೆಯನ್ನು ಆರಂಭಿಸಿದೆ ಎಂದು ಮೇಯರ್ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್‌ನಿಂದ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳಿಗೆ ಬಟ್ಟೆ , ಬೇಬಿ ಸೋಪ್ ಮತ್ತು ಬೇಬಿ ಪೌಡರ್ ನೀಡಲಾಗುತ್ತಿದ್ದು, ಯೋಜನೆಯನ್ನು ಉಪಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಉದ್ಘಾಟಿಸಿದ್ದು, ಸುಮಾರು 11 ಸಾವಿರಕ್ಕೂ ಹೆಚ್ಚಿನ ಮಕ್ಕಳು ಯೋಜನೆಯ ಲಾಭ ಪಡೆದಿವೆ ಎಂದು ಮೇಯರ್ ಸುಬ್ರಮಣ್ಯಂ ಹೇಳಿದ್ದಾರೆ . ತಮ್ಮ ಪುತ್ರನಿಗೆ ಆಂಗ್ಲ (ಸ್ಟಾಲಿನ್) ಹೆಸರಿಟ್ಟಿರುವ ಮುಖ್ಯಮಂತ್ರಿ ಕರುಣಾನಿಧಿ ಹುಟ್ಟುಹಬ್ಬದ ನೆಪದಲ್ಲಿ ತಮಿಳು ಹೆಸರಿಟ್ಟವರಿಗೆ ಚಿನ್ನದ ಉಂಗುರದ ಕೊಡುಗೆ ನೀಡುವ ಕೊಡುಗೆ ಸೋಜಿಗದ ಸಂಗತಿಯಾಗಿದೆ! |