ಅವರು ಪರಸ್ಪರ ವಿರೋಧ ವಿರೋಧ ಪಕ್ಷಗಳಲ್ಲಿ ಕುಳಿತಿರ ಬಹುದು. ಆದರೆ ಒಂದೇ ಕುಟುಂಬದ ಈ ರಕ್ತ ಸಂಬಂಧಿಗಳು ತಮ್ಮ ಸೌಜನ್ಯವನ್ನು ಮರೆಯದೆ ಮೆರೆದರು. ಪರಸ್ಪರ ಮುಗುಳ್ನಕ್ಕು ಕಿರಿಯರು ಹಿರಿಯರಿಗೆ ವಂದಿಸಿದರು.ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಸಂಸದ ವರುಣ್ ಗಾಂಧಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಎದುರಿನ ಸೀಟಿನಲ್ಲಿ ಕುಳಿತಿದ್ದ ತನ್ನ ದೊಡ್ಡಮ್ಮ ಸೋನಿಯಾ ಗಾಂಧಿ ಅವರನ್ನು ಕಂಡು ಮುಗುಳ್ನಕ್ಕು ಎರಡೂ ಕೈ ಜೋಡಿಸಿ ವಂದಿಸಿದರು. ಇದೇ ವೇಳೆ ವರುಣ್ ಸೋದರ ಅಮೇಥಿ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ತನ್ನ ಚಿಕ್ಕಮ್ಮ ಮನೇಕಾ ಗಾಂಧಿ ಅವರಿಗೆ ವಂದಿಸಿದರು. ವರುಣ್ ಗಾಂಧಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಸೋನಿಯಾ ಮುಖದಲ್ಲಿ ಮೆಚ್ಚುಗೆಯ ಮುಗುಳ್ನಗು ಕಾಣುತ್ತಿತ್ತು. ಇದೇ ವೇಳೆ ಸ್ಪೀಕರ್ ಗ್ಯಾಲರಿಯಲ್ಲಿ ತನ್ನ ಪತಿಯೊಂದಿಗೆ ಕುಳಿತಿದ್ದ, ವರುಣ್ ಗಾಂಧಿಯ ಅಕ್ಕ ಪ್ರಿಯಾಂಕ ಗಾಂಧಿಯ ಮುಖದಲ್ಲೂ ಮುಗುಳ್ನಗು.ಅಮೇಠಿ ಕ್ಷೇತ್ರದ ರಾಹುಲ್ ಗಾಂಧಿ ಪ್ರತಿಜ್ಞಾ ವಿಧಿ ಪಠಿಸಿದಾಗ ಮನೇಕಾ ಗಾಂಧಿ ಮೇಜು ಕುಟ್ಟಿ ಸಂತಸ ಸೂಚಿಸಿದರು. ರಾಹುಲ್ ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಮನೇಕಾ ಗಾಂಧಿ ಮುಖದಲ್ಲಿ ದೊಡ್ಡ ನಗು. ರಾಹುಲ್ ಇದು ದ್ವಿತೀಯ ಬಾರಿಗೆ ಸಂಸದರಾಗುತ್ತಿದ್ದರೆ, ವರುಣ್ ಗಾಂಧಿ ಅವರು ಸಂಸತ್ತು ಪ್ರವೇಶಿಸುತ್ತಿರುವುದು ಇದು ಪ್ರಥಮ. ಫಿರೋಜ್ ವರುಣ್ ಗಾಂಧಿ ಎಂಬುದಾಗಿ ವರುಣ್ ಹೆಸರನ್ನು ಕರೆದಾಗ ಮುಂದೆ ಬಂದ ವರುಣ್ ಟ್ರೆಜರಿ ಬೆಂಚಲ್ಲಿ ಆಸೀನರಾಗಿದ್ದ ಸೋನಿಯಾ ಗಾಂಧಿಯವರಿಗೆ 'ನಮಸ್ತೆ' ಮಾಡಿದರು.ರಾಹುಲ್ ಗಾಂಧಿ ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ಅವರ ಕೈಕುಲುಕಿದರು. ಹಾಗೂ ಬಿಜೆಪಿಯ ಇತರ ನಾಯಕರು ಹಾಗೂ ವಿಪಕ್ಷಗಳ ಸ್ಥಾನದ ಎರಡನೇ ಸಾಲಿನಲ್ಲಿ ಕುಳಿತಿದ್ದ ಮನೇಕಾ ಗಾಂಧಿಯವರಿಗೂ ವಂದಿಸಿದರು.ಆದರೆ ಪ್ರಮಾಣವಚನ ಸ್ವೀಕರಿಸಿದ ಮನೇಕಾ ಗಾಂಧಿ ಮಾತ್ರ, ತನ್ನ ಓರಗಿತ್ತಿ ಕುಳಿತಿದ್ದ ಟ್ರೆಜರಿ ಬೆಂಚಿನತ್ತ ತಿರುಗಿಯೂ ನೋಡಲಿಲ್ಲ. ಇವರಲ್ಲದೆ, ಇತರ ಪ್ರಮುಖರಾದ ಮುಲಾಯಂ ಸಿಂಗ್ ಯಾದವ್, ಅವರ ಪುತ್ರ ಅಭಿಶೇಖ್ ಯಾದವ್, ಸೋದರಳಿಯ ಧರ್ಮೇಂದ್ರ, ಅಜಿತ್ ಸಿಂಗ್, ಅವರ ಪುತ್ರ ಜಯಂತ್ ಚೌಧರಿ ಸಚಿವರಾದ ಮಮತಾ ಬ್ಯಾನರ್ಜಿ, ಶ್ರೀಪ್ರಕಾಶ್ ಜೈಸ್ವಾಲ್ ಹಾಗೂ ಪ್ರತೀಕ್ ಪಾಟಿಲ್ ಸೇರಿದಂತೆ ಸುಮಾರು 195 ಮಂದಿ ಪ್ರಮಾಣ ವಚನ ಸ್ವೀಕರಿಸಿದರು. ಸೋಮವಾರ 335 ಮಂದಿ ಪ್ರಮಾಣ ಮಾಡಿದ್ದರು. |