ಮುಂಬೈದಾಳಿ ರೂವಾರಿ ಜಮಾತ್ ಉದ್ ದಾವ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ಮಂಗಳವಾರ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.
ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಮಾತುಕತೆಯ ವೇಳೆ ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ. ನಾರಾಯಣ್ ಮತ್ತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರರ್ ಮೆನನ್ ಉಪಸ್ಥಿತರಿದ್ದರು.
ಮಾತುಕತೆ ವೇಳೆ ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ದಾಳಿಯ ಕುರಿತು ಚರ್ಚಿಸಲಾಯತು ಎನ್ನಲಾಗಿದೆ.
ಮುಂಬೈ ದಾಳಿಯ ರೂವಾರಿ ಸಯೀದ್ ಮುಕ್ತವಾಗದಗಂತೆ ತಡೆಯಲು ಭಾರತವು ಕೈಗೊಳ್ಳದಾದ ಕ್ರಮಗಳ ಆಯ್ಕೆಯ ಕುರಿತು ಕೃಷ್ಣ ಹಾಗೂ ಸಿಂಗ್ ಚರ್ಚಿಸಿದರೆಂದು ಮೂಲಗಳು ತಿಳಿಸಿವೆ.
ಮುಂಬೈದಾಳಿಯಲ್ಲಿ ಪಾಲ್ಗೊಂಡಿರುವವರ ವಿರುದ್ಧ ಪಾಕಿಸ್ತಾನವು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಅಂತಾರಾಷ್ಟ್ರೀಯ ಸಮುದಾಯ, ಅದರಲ್ಲೂ ನಿರ್ದಿಷ್ಟವಾಗಿ ಅಮೆರಿಕವನ್ನು ಭಾರತ ಒತ್ತಾಯಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರಲು ನವದೆಹಲಿಯು ಕಾರ್ಯಕೈಗೊಳ್ಳುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೃಷ್ಣ ಭಾರತವು ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ನುಡಿದರು.
ಜೂನ್ 10ರಂದು ಅಮೆರಿಕದ ವಿದೇಶಾಂಗ ಇಲಾಖೆಯ ಆಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಅವರು ಭೇಟಿ ನೀಡುವ ವೇಳೆ ಭಾರತಕ್ಕೆ ಈ ವಿಚಾರವನ್ನು ಎತ್ತಲು ಅವಕಾಶವಿದೆ. ಉಗ್ರಗಾಮಿ ಸಂಘಟನೆ ಲಷ್ಕರೆಯ ಇನ್ನೊಂದು ಮುಖವಾಗಿರುವ ಜಮಾತ್ ಉದ್ ದಾವಾದ ಮುಖ್ಯಸ್ಥ ಸಯೀದ್ ಮುಂಬೈ ದಾಳಿಯಲ್ಲಿ ಒಳಗೊಂಡಿರುವ ಅಂಶವನ್ನು ಅಮೆರಿಕ ಇದೀಗಾಗಲೇ ಗಮನಿಸಿದೆ.
ಸಯೀದ್ ಬಿಡುಗಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಇದು ಮುಂಬೈ ದಾಳಿಕೋರರನ್ನು ಕಾನೂನಿನ ಕಟಕಟೆಗೆ ತರಲು ಪಾಕಿಸ್ತಾನದ ಗಂಭೀರತೆಯ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದು ಪ್ರತಿಕ್ರಿಯಿಸಿದೆ. |