ಡಿಎಂಕೆ ವರಿಷ್ಠ, ತಮಿಳ್ನಾಡು ಮುಖ್ಯಮಂತ್ರಿ ಕರುಣಾ ನಿಧಿ ಅವರು ಬುಧವಾರ 86ವರ್ಷಕ್ಕೆ ಕಾಲಿರಿಸಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಪಕ್ಷದ ಕಚೇರಿಗೆ ತೆರಳುವ ಮುನ್ನ ಅವರು ತಮ್ಮ ಮನೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ತಮ್ಮ ರಾಜಕೀಯ ಗುರು ಸಿ.ಎನ್. ಅಣ್ಣಾದುರೈ ಹಾಗೂ ಡಿಎಂಕೆ ಸಂಸ್ಥಾಪಕ ಇ.ವಿ.ಕೆ ಪೆರಿಯಾರ್ ಅವರುಗಳ ಸಮಾಧಿಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದರು.ಐದು ಬಾರಿ ತಮಿಳ್ನಾಡು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವ ಕರುಣಾನಿಧಿ ಅವರಿಗೆ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಜಯಭೇರಿ ಬಾರಿಸಿರುವುದರಿಂದ ಈ ಹುಟ್ಟುಹಬ್ಬಕ್ಕೆ ಮತ್ತಷ್ಟು ಸಂತೋಷ ಹಾಗೂ ಮೆರುಗು. ಪಕ್ಷವು 39 ಸ್ಥಾನಗಳಲ್ಲಿ 18 ಸ್ಥಾನಗಳನ್ನು ತನ್ನದಾಗಿರಿಸಿಕೊಂಡಿದೆ. ತನ್ನ ಉತ್ತರಾಧಿಕಾರಿ ಯಾರು ಎಂಬ ಬಹುಕಾಲದ ಪ್ರಶ್ನೆಗೆ ಕರುಣಾನಿಧಿ ಅವರು ಇತ್ತೀಚೆಗೆ ಉತ್ತರ ನೀಡಿದ್ದರು. ತನ್ನ ಎರಡನೆ ಪುತ್ರ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ್ದಾರೆ. ಮಧುರೈ ಮೂಲದ ಪುತ್ರ ಅಳಗಿರಿ ಕೇಂದ್ರದಲ್ಲಿ ಸಂಪುಟ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮರುದಿನದಂದೇ ಸ್ಟಾಲಿನ್ ಉಪಮುಖ್ಯಮಂತ್ರಿಯಾಗಿದ್ದಾರೆ. ಇನ್ನೋರ್ವ ಪುತ್ರಿ ಕನಿಮೊಳಿಯನ್ನು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷೆಯನ್ನಾಗಿಸುವ ಇರಾದೆ ಕರುಣಾನಿಧಿ ಅವರಿಗಿದೆ ಎಂದು ಮೂಲಗಳು ಹೇಳಿವೆ.ನೂರಾರು ಕಾರ್ಯಕರ್ತರು ತಮ್ಮ ಪ್ರೀತಿಯ ನಾಯಕನಿಗೆ ಶುಭಾಶಯ ಕೋರಲು ಸರತಿಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿತ್ತು. ಪಕ್ಷದ ಕೇಂದ್ರ ಸಚಿವರಾದ ಎ. ರಾಜಾ, ಸಂಸದರಾದ ಆರ್ಕಾಟ್ ಎನ್. ವೀರಸ್ವಾಮಿ, ದುರೈಮುರುಗನ್, ಡಿ. ನೆಪೋಲಿಯನ್ ಸೇರಿದಂತೆ ಇತರ ಪ್ರಮುಖರು ಡಿಎಂಕೆ ವರಿಷ್ಠರನ್ನು ಭೇಟಿಯಾದರು. |