ಕಾಂಗ್ರೆಸ್ ತನ್ನ ಶೋಕೇಸಿನ ತುಂಬ ದಲಿತ ಮಹಿಳೆಯರನ್ನು ತುಂಬಿಸಿದ್ದು, ಈ ಮೂಲಕ ತಾನೇ ಏಕೈಕ ದಲಿತ ನಾಯಕಿ ಎಂದು ಮೆರೆದಾಡುವ ಬಿಎಸ್ಪಿ ವರಿಷ್ಠೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯವತಿ ಅವರ ಗರ್ವಭಂಗ ಮಾಡಲು ತಂತ್ರ ಹೆಣೆದಂತಿದೆ.ಟೀಕಾಕಾರರ ಮುಖಕ್ಕೆ ಹೊಡೆಯುವಂತೆ ಮಹಿಳಾ ಅಭ್ಯರ್ಥಿಯೊಬ್ಬರನ್ನು ಸ್ಪೀಕರ್ ಆಗಿಸಿದ ಕಾಂಗ್ರೆಸ್ ಹೊಸ ಇತಿಹಾಸ ಸೃಷ್ಟಿಸಿದೆ. ಮೀರಾ ಕುಮಾರ್ ಮಹಿಳಾ ಅಭ್ಯರ್ಥಿಯೂ ಹೌದು ಜತೆಗೆ ದಲಿತ ಅಭ್ಯರ್ಥಿಯೂ ಹೌದು.ಕಳೆದ ಬಾರಿ ಅಷ್ಟೇನು ಮಹತ್ವವಿಲ್ಲದ ಖಾತೆವಹಿಸಿದ್ದ ಸೆಲ್ಜಾ ಕುಮಾರಿ ಅವರುನ್ನು ಈ ಬಾರಿ ಪ್ರವಾಸೋದ್ಯಮ ಖಾತೆ ನೀಡಿ ಸಂಪುಟ ದರ್ಜೆ ನೀಡಲಾಗಿದೆ. ಇದಲ್ಲದೆ, ವಸತಿ ಹಾಗೂ ನಗರ ಬಡತನ ನಿರ್ಮೂಲನ ಖಾತೆಯೂ ಅವರಿಗಿ ನೀಡಲಾಗಿದೆ. ದೆಹಲಿಯ ಏಳು ಸಂಸದರಲ್ಲಿ ಒಬ್ಬರಾಗಿರುವ ಕೃಷ್ಣ ತೀರ್ಥ್ ಅವರೂ ಸ್ಫರ್ಧೆಯಲ್ಲಿ ಹಿಂದೆ ಬಿದ್ದಿಲ್ಲ. ಅವರನ್ನು ಮಹಿಳಾ ಮತ್ತು ಮಕ್ಕಳ ಖಾತೆಯ ರಾಜ್ಯ ಸಚಿವೆಯನ್ನಾಗಿಸಲಾಗಿದೆ. ಆಂಧ್ರದ ಪನಬಾಕ ಲಕ್ಷ್ಮಿ ಮಂತ್ರಿ ಈ ಬಾರಿಯೂ ಮಂಡಲದಲ್ಲಿ ಮುಂದುವರಿದಿದ್ದು, ಈ ಸರ್ತಿ ಜವಳಿಖಾತೆಯ ರಾಜ್ಯ ಸಚಿವರಾಗಿದ್ದಾರೆ. ಸಚಿವೆಯಾಗಿ ಅಧಿಕಾರ ವಹಿಸಿದ್ದ ಮೀರಾ ಕುಮಾರ್ ಅವರ ಹೆಸರು ಸ್ಪೀಕರ್ ಸ್ಥಾನಕ್ಕೆ ಕೇಳಿ ಬಂದದ್ದು ಅತಿದೊಡ್ಡ ಅಚ್ಚರಿ. ಈ ನಾಲ್ವರು ಸಂಸದೆಯರಲ್ಲಿರುವ ಸಮಾನತೆ ಎಂದರೆ ಇವರೆಲ್ಲರು ದಲಿತ ಮಹಿಳೆಯರು. ತನ್ನ ದಲಿತ ಮತಬ್ಯಾಂಕನ್ನು ಮತ್ತೆ ತನ್ನತ್ತ ಸೆಳೆಯಲು ಕಾಂಗ್ರೆಸ್ ಮುಂದಾಗುತ್ತಿರುವ ಸೂಚನೆ. ಉತ್ತರ ಪ್ರದೇಶದಲ್ಲಿ ತಪ್ಪಿಹೋಗಿರುವ ಹಿಡಿತವನ್ನು ಮರಳಿ ಸಾಧಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ನ ಪ್ರಥಮ ಗುರಿ ಬಿಎಸ್ಪಿ ಮಾಯಾವತಿ. ಲೋಕಸಭಾ ಚುನಾವಣೆಯಲ್ಲಿ 21 ಸ್ಥಾನಗಳನ್ನು ಗೆದ್ದಿರುವುದು ಕಾಂಗ್ರೆಸ್ ಹಸಿವನ್ನು ಹೆಚ್ಚಿಸಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಅದು ಕಣ್ಣಿರಿಸಿದೆ. ಕಾಂಗ್ರೆಸ್ ಕ್ಯಾಲೆಂಡರಿನಲ್ಲಿ 2012ನ್ನು ಕೆಂಪುಬಣ್ಣದಲ್ಲಿ ಗುರುತಿಸಲಾಗಿದೆ. 2012ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿಯವರನ್ನು ಪಟ್ಟದಿಂದ ಎಳೆದು ಹಾಕುವುದು ಕಾಂಗ್ರೆಸ್‌ನ ಪ್ರಮುಖ ಕಾರ್ಯ. ಮೀರಾ ಕುಮಾರ್ ಅವರು ಸ್ಪೀಕರ್ ಆಗಿರುವುದು ಬರಿಯ ಆಕಸ್ಮಿಕವಲ್ಲ. ಇದರ ಹಿಂದೆ ಉತ್ತರ ಪ್ರದೇಶ ಚುನಾವಣೆಗೆ ರಾಹುಲ್ ಗಾಂಧಿ ಅವರ ಕಾರ್ಯತಂತ್ರವೂ ಸೇರಿದೆ. ದಲಿತನಾಯಕಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮಾಯಾವತಿ ಅವರಿಗೆ ಸಡ್ಡುಹೊಡೆಯಲು ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ.ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿರುವಂತೆ ಎಐಸಿಸಿ ಪ್ರಧಾನಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಪಕ್ಷದ ಮುಂದಿನ ಹೆಜ್ಜೆಯ ಕುರಿತು ವಿಸ್ತೃತ ಚರ್ಚೆ ನಡೆಸಿದ್ದರು. ಇದಲ್ಲದೆ ಸದ್ಯವೇ 11 ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಯಲ್ಲಿ ಮಾಯಾವತಿ ಅವರ ಶಕ್ತಿಯನ್ನು ಕುಗ್ಗಿಸಬೇಕು ಎಂಬುದು ಕಾಂಗ್ರೆಸ್‌ನ ತಕ್ಷಣದ ಧ್ಯೇಯ.ದಿಗ್ವಿಜಯ್ ಸಿಂಗ್ ಅವರೂ ಉತ್ತರ ಪ್ರದೇಶದ ಮುಂದಿನ ಯೋಜನೆಗಳ ಕುರಿತು ರಾಹುಲ್ ಜತೆ ಚರ್ಚಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 2012ರ ಚುನಾವಣೆಗೆ ನಾವು ಎಲ್ಲ 'ಬ್ಯಾಟರಿಗಳನ್ನು ಛಾರ್ಜ್ ಮಾಡಿ' ಸಿದ್ಧವಾಗಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. |