ಮಾಂಗಲ್ಯಂ ತಂತುನಾನೇನಾ...ಸಂಸ್ಕೃತ ಮಂತ್ರಗಳ ಪಠಣವಾಗುತ್ತಿತ್ತು. ಅದು ಅಪ್ಪಟ ಭಾರತೀಯ ಸಂಪ್ರದಾಯದ ಮದುವೆ ಮಂಟಪ. ಆದರೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದ ಆ ಜೋಡಿ ಮಾತ್ರ ಭಾರತದಲ್ಲ. ಅದು ಅಮೆರಿಕದ ಜೋಡಿ. ಈ ಜೋಡಿ ತಮ್ಮ 50ರ ಹರೆಯದಲ್ಲಿ ಗೃಹಸ್ಥಾಶ್ರಮ ಸೇರಲು ನಿರ್ಧರಿಸಿ ಅನಂತ ಪ್ರೀತಿಯ ಪ್ರತೀಕವಾದ ತಾಜ್ ಮಹಲ್ ಕಂಗೊಳಿಸುವ ಆಗ್ರಾಕ್ಕೆ ಆಗಮಿಸಿದೆ.
ಕೊನಾರ್ಡ್ ರೊಯೆಸ್ಕಿ ಮತ್ತು ಮಿಶೆಲ್ ಅಲೆಕ್ಸಾಂಡರ್ ಅವರುಗಳು ಅಮೆರಿಕದ ದಕ್ಷಿಣ ಲೌಸಿನಿಯಾದವರು. ಇವರ ವಿವಾಹವನ್ನು ಐಟಿಸಿ ಮೊಘಲ್ ಆಯೋಜಿಸಿತ್ತು ಎಂಬುದಾಗಿ ಪಂಚಾತಾರ ಹೊಟೇಲಿನ ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ. ಈ ವಿವಾಹಕ್ಕೆ ನಮ್ಮನ್ನು ಆರಿಸಿರುವುದು ನಮಗೆ ಸಂತಸವಾಗಿದೆ ಎಂದು ಐಟಿಸಿ ಮೊಘಲ್‌ನ ಜನರಲ್ ಮ್ಯಾನೇಜರ್ ಕುಲದೀಪ್ ಭಾರ್ತಿ ಹೇಳಿದ್ದಾರೆ.
ಈ ಜೋಡಿ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಿಶೆಲ್ ಗಂಭೀರ ಖಾಯಿಲೆಗೊಳಗಾಗಿದ್ದಾಗ ಕೊನಾರ್ಡ್ ಅವರಿಗೆ ಸೇವೆ ಸಲ್ಲಿಸಿದ್ದರು. ಅವರು ಗುಣಮುಖರಾದ ಕೂಡಲೇ ಮದುವೆ ಪ್ರಸ್ತಾಪ ಇಟ್ಟಿದ್ದರು. ಮಿಶೆಲ್ ಒಪ್ಪಿಗೆ ಸೂಚಿಸಿದಾಗ ಅವರಿಗೆ ತಮ್ಮ ಪ್ರೀತಿಗೆ ವಿವಾಹದ ಮುದ್ರೆ ಒತ್ತಲು ಪ್ರೀತಿಯ ನಗರ ಆಗ್ರಾಕ್ಕಿಂತ ಇತರ ಉತ್ತಮ ಸ್ಥಳ ಹೊಳೆಯಲಿಲ್ಲ.
ತಮ್ಮ ಮದುವೆ ನಿಕ್ಕಿಯಾಗುತ್ತಿರುವಂತೆ ಐಟಿಸಿ ಮೊಘಲ್‌ಗೆ ಪತ್ರ ಬರೆದ ಅವರು ತಮಗೆ ಭಾರತೀಯ ಪದ್ಧತಿಯಂತೆ ವಿವಾಹ ಸಮಾರಂಭವನ್ನು ಏರ್ಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ಪಂದಿಸಿದ ಹೋಟೇಲ್ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯವನ್ನು ಏರ್ಪಡಿಸಿತ್ತು.
ಪುಷ್ಪಾಲಂಕೃತ ಮಂಟಪ, ಮೇಲ್ಕಟ್ಟು, ಹಿಂದೂ ಪುರೋಹಿತರ ಪೌರೋಹಿತ್ಯದೊಂದಿಗೆ ವಿವಾಹ ಕಾರ್ಯ ಸಾಂಗವಾಗಿ ನೆರವೇರಿತು.
"ಇದು ನನ್ನ ಕನಸಿನ ಉತ್ತುಂಗದ ಕ್ಷಣ. ತಾಜ್ ಮಹಲ್ ಇರುವ ನಗರದಲ್ಲಿ ವಿವಾಹವಾಗಬೇಕೆಂಬುದು ನನ್ನ ಮಹದಾಸೆಯಾಗಿತ್ತು" ಎಂಬುದಾಗಿ ವಧು ವಿವಾಹದ ನಂತರ ಪ್ರತಿಕ್ರಿಯಿಸಿದ್ದಾರೆ.
ಆಗ್ರಾದಲ್ಲಿರುವ ಐಟಿಸಿ ಮೊಘಲ್ ವಿದೇಶಿಯರಿಗೆ ಜನಪ್ರಿಯ ವಿವಾಹ ತಾಣವಾಗುತ್ತಿದೆ. ಆಗ್ರಾವು ಗೋವಾ, ಕೇರಳದೊಂದಿಗೆ ವಿವಾದ ಪ್ರವಾಸೋದ್ಯಮ ತಾಣವಾಗುತ್ತಿದ್ದು ವಿಶ್ವಾದ್ಯಂತ ವಿವಾಹಾಪೇಕ್ಷಿತ ಜೋಡಿಗಳ ಗಮನ ಸೆಳೆಯುತ್ತಿದೆ. ವಿವಾಹವು ಬಹುಲಕ್ಷ ಡಾಲರ್‌ಗಳ ಉದ್ಯಮವಾಗುತ್ತಿದೆ. |