ಮುಂಬೈದಾಳಿಯ ರೂವಾರಿ ಲಷ್ಕರೆ ಮುಖ್ಯಸ್ಥ ಹಫೀಜ್ ಸಯೀದ್ ಬಿಡುಗಡೆಯಾಗಿ ಎರಡು ದಿನಗಳಲ್ಲೇ, ಭಾರತದ ಮೇಲೆ ಇನ್ನೊಂದು ಸಂಭಾವ್ಯ ದಾಳಿ ನಡೆಯುವ ಸಾಧ್ಯತೆ ಇದೆ ಎಂಬುದಾಗಿ ಗುಪ್ತಚರ ವರದಿಗಳು ಹೇಳಿವೆ.
ಗುಪ್ತಚರ ಇಲಾಖೆಯು ನವೆಂಬರ್ 26ರ ದಾಳಿಗೆ ಮುಂಚಿತವಾಗಿ ನೀಡಿದ್ದ ಮಾಹಿತಿಯಂತೆ ಅಲ್ಲದ, ಈ ಸರ್ತಿ ಹೆಚ್ಚು ನಿಖರವಾದ ಮಾಹಿತಿ ನೀಡಿದ್ದು, ನೇರವಾಗಿ ಲಷ್ಕರೆ ಸಂಘಟನೆಯತ್ತ ಬೆಟ್ಟುಮಾಡಿದೆ.
ಹಿಂದೂಗಳು ಉಗ್ರರ ಅಗ್ರ ಪಟ್ಟಿಯಲ್ಲಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ. ದಕ್ಷಿಣ ರಾಜ್ಯಗಳ ಮೇಲೆ ಉಗ್ರರು ಕಣ್ಣಿದ್ದು ಈ ರಾಜ್ಯಗಳಲ್ಲಿನ ಸೂಕ್ಷ್ಮವಾದ ಸ್ಥಳಗಳನ್ನು ತನ್ನ ಗುರಿಯಾಗಿಸಬಹುದು ಎಂದು ವರದಿಗಳು ಹೇಳಿವೆ.
ಉಗ್ರರಾದ ಜಾಕಿರ್ ಉರ್ ರೆಹ್ಮಾನ್ ಲಕ್ವಿ ಮತ್ತು ಜರಾರ್ ಶಾ ಅವರುಗಳು ಜೈಲಿನಲ್ಲಿದ್ದರೂ ದಾಳಿಗಳನ್ನು ಯೋಜಿಸಲು ಶಕ್ತವಾಗಿದ್ದಾರೆ. ಇದರಿಂದಾಗಿ ಭಯೋತ್ಪಾದನೆಯ ವಿರುದ್ಧದ ಯುದ್ಧದ ಕುರಿತು ಪಾಕಿಸ್ತಾನದ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ.
ಈ ಸಂದರ್ಭದಲ್ಲಿ ಇನ್ನೊಂದು ದಾಳಿಏನಾದರೂ ಸಂಭವಿಸಿದರೆ ಪಾಕಿಸ್ತಾನದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುವ ಒತ್ತಡ ಎದುರಾಗಬಹುದು ಎಂಬ ಚಿಂತೆ ಭಾರತವನ್ನು ಆವರಿಸಿದೆ.
ಇದೇವೇಳೆ ಹಫೀಜ್ ಬಿಡುಗಡೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಅಮೆರಿಕ ಮತ್ತು ಭಾರತ ತೀವ್ರ ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಲಾಹೋರ್ ಹೈಕೋರ್ಟ್ ಹಫೀಜ್‌ನನ್ನು ಬಿಡುಗಡೆ ಮಾಡಿರುವುದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.
ಅಮೆರಿಕದ ಒತ್ತಡ ಈ ಮಧ್ಯೆ ಮುಂಬೈ ದಾಳಿ ಕೋರರನ್ನು ಕಾನೂನಿನ ಕಟಕಟೆಗೆ ತರಲು ಕಾರ್ಯಕೈಗೊಳ್ಳುವಂತೆ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿದೆ.
ಹಫೀಜ್ ಬಿಡುಗಡೆ ಹಿನ್ನೆಲೆಯಲ್ಲಿ ಭಾರತದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದಿರುವ ಅಮೆರಿಕ, ಭಾರತ ಮತ್ತು ಪಾಕಿಸ್ತನಾಕ್ಕೆ ಭೇಟಿ ನೀಡಬೇಡಿ ಎಂಬುದಾಗಿ ತನ್ನ ಪ್ರಜೆಗಳಿಗೆ ಸಲಹೆ ಮಾಡಿದೆ. |