ಭಾರತಕ್ಕೆ ಪ್ರಯಾಣಿಸಬೇಡಿ ಎಂಬುದಾಗಿ ಅಮೆರಿಕ ತನ್ನ ಪ್ರಜೆಗಳಿಗೆ ಸಲಹೆ ನೀಡಿರುವುದರಿಂದ ಭಾರತ ಅಸಮಾಧಾನಗೊಂಡಿದ್ದು, ಇದು ಸಮರ್ಥನೀಯವಲ್ಲದ ಕಾರಣ ಈ ಸಲಹೆಯನ್ನು ಹಿಂತೆಗೆಯುವಂತೆ ಸರ್ಕಾರವು ಅಮೆರಿಕವನ್ನು ಕೋರುವುದಾಗಿ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.ಅಮೆರಿಕದ ಎಂಬೆಸಿ ವೆಬ್‌ಸೈಟಿನಲ್ಲಿ ತುರ್ತು ರಕ್ಷಕ ಸಂದೇಶ ನೀಡಿರುವ ಅಮೆರಿಕ, ತನ್ನ ಪ್ರಜೆಗಳಿಗೆ ಭಾರತದ ವಿರುದ್ಧ ಎಚ್ಚರಿಕೆ ನೀಡಿದೆ. "ಭಾರತದಾದ್ಯಂತ ಭಯೋತ್ಪಾದನೆಯ ಬೆದರಿಕೆ ಇದೆ" ಎಂಬುದಾಗಿ ಅಮೆರಿಕದ ಪ್ರಜೆಗಳಿಗೆ ತುರ್ತಾಗಿ ನೆನಪಿಸಲು ಭಾರತದಲ್ಲಿರುವ ಅಮೆರಿಕದ ಮಿಶನ್ ಬಯಸುತ್ತದೆ" ಎಂಬುದಾಗಿ ಸಂದೇಶದಲ್ಲಿ ಹೇಳಲಾಗಿದೆ.ಭಾರತದಾದ್ಯಂತ ಭಯೋತ್ಪಾದನೆಯ ಹೆಚ್ಚಿನ ಭೀತಿ ಇರುವ ಕಾರಣ ಅಮೆರಿಕ ಪ್ರಜೆಗಳು ಎಲ್ಲಾ ಕಾಲದಲ್ಲೂ ಎಚ್ಚರ ವಹಿಸಬೇಕು. ಸ್ಥಳೀಯ ಸುದ್ದಿಗಳನ್ನು ಗಮನಿಸುತ್ತಲೇ ಇರಬೇಕು. ತಮ್ಮ ದೈನಂದಿನ ಚಟುವಟಿಕೆ ನಡೆಸುವ ವೇಳೆ ತಮ್ಮ ಮಾರ್ಗ ಹಾಗೂ ಸಮಯವನ್ನು ಬದಲಿಸುತ್ತಿರಬೇಕು" ಎಂದು ಸಂದೇಶದಲ್ಲಿ ಹೇಳಲಾಗಿದೆ.ಇದಲ್ಲದೆ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆ, ತಮ್ಮ ಹೋಟೇಲುಗಳು, ಮನೋರಂಜನಾ ತಾಣಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವ ವೇಳೆಗೆ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಗಣಿಸಬೇಕು ಎಂದು ಅಮೆರಿಕದ ಪ್ರಜೆಗಳಿಗೆ ಎಚ್ಚರಿಸಲಾಗಿದೆ. |