ಗುಜರಾತಿನಲ್ಲಿ 2002ರಲ್ಲಿ ಗೋಧ್ರಾ ನಂತರದ ಗಲಭೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇನ್ನೂ 62 ಮಂದಿಯ ವಿರುದ್ಧ ಸುಪ್ರೀಂಕೋರ್ಟ್ ನೇಮಿತ ವಿಶೇಷ ತನಿಖಾ ತಂಡದಿಂದ ಅಥವಾ ಬೇರಾವುದೇ ಪ್ರಕ್ರಿಯೆ ಮೂಲಕ ಹೊಸದಾದ ತನಿಖೆಗೆ ತಡೆಯಾಜ್ಞೆ ವಿಧಿಸಲು ಗುಜರಾತ್ ಹೈಕೋರ್ಟ್ ನಿರಾಕರಿಸಿದೆ.
ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಪಟ್ಟಂತೆ ರಾಜ್ಯಸರ್ಕಾರಕ್ಕೆ ಮತ್ತು ಎಸ್‌ಐಟಿ ಸದಸ್ಯರಿಗೆ ಕೋರ್ಟ್ ನೋಟಿಸ್ ಕೂಡ ನೀಡಿದೆ.ದೂರಿನಲ್ಲಿ ಹೆಸರಿಸಲಾದ ಬಿಜೆಪಿ ಮಾಜಿ ಶಾಸಕ ಕಾಲುಬಾಯಿ ಹೀರಾಬಾಯಿ ಮಲಿವಾಡ್ ತನಿಖೆಗೆ ತಡೆಯಾಜ್ಞೆ ನೀಡುವಂತೆ ಮತ್ತು ಮೋದಿ ಸೇರಿದಂತೆ ದೂರಿನಲ್ಲಿ ಹೆಸರಿಸಿರುವ ವ್ಯಕ್ತಿಗಳನ್ನು ಬಂಧಿಸದಂತೆ ಎಸ್‌ಐಟಿಗೆ ಸಂಯಮ ವಿಧಿಸಬೇಕೆಂದು ಕೋರ್ಟ್‌ಗೆ ಕೋರಿದ್ದರು.
ಮಾಜಿ ಸಂಸದ ಎಹಸಾನ್ ಜಾಫ್ರಿ ಗುಲ್‌ಬುರ್ಗ್ ಸೊಸೈಟಿಯಲ್ಲಿ ಸಂಭವಿಸಿದ 2002ರ ಕೋಮುಗಲಭೆಯಲ್ಲಿ ಇನ್ನೂ 39 ಮಂದಿಯೊಂದಿಗೆ ಹತರಾಗಿದ್ದು ಅವರ ಪತ್ನಿ ಜಾಕಿಯ ಜಾಫ್ರಿ ನ್ಯಾಯ ಒದಗಿಸುವಂತೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶುಕ್ಲಾ ತನಿಖೆಗೆ ತಡೆ ನೀಡುವ ರೂಪದಲ್ಲಿ ಮೋದಿ ಮತ್ತು ಇತರರಿಗೆ ಮಧ್ಯಂತರ ಪರಿಹಾರ ನೀಡುವುದಕ್ಕೆ ನಿರಾಕರಿಸಿದರು.
2002ರ ಗೋಧ್ರಾ ನಂತರದ ಕೋಮುಗಲಭೆಗೆ ಮೋದಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು, ಪೊಲೀಸ್ ಅಧಿಕಾರಿಗಳು, ಹಿರಿಯ ಆಡಳಿತಾಧಿಕಾರಿಗಳು ಕುಮ್ಮಕ್ಕು ನೀಡಿದರೆಂದು ಜಾಕಿಯ ನೀಡಿದ ದೂರನ್ನು ಕುರಿತು ಮೂರು ತಿಂಗಳಲ್ಲಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. |