ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಿ ಮೂಲದ ಕುರಿತು ಟೀಕಿಸಿಸಿರುವುದಕ್ಕೆ ಹತ್ತು ವರ್ಷಗಳ ಬಳಿಕ ಎನ್‌ಸಿಪಿ ನಾಯಕ ಪಿ.ಎ. ಸಂಗ್ಮಾ ಅವರು ಕ್ಷಮೆ ಯಾಚಿಸಿದ್ದು, ಇದೀಗ ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ವಿಲೀನವಾಗಲಿದೆಯೇ ಎಂಬ ಊಹೆಗಳು ದಟ್ಟವಾಗಿವೆ. ಈ ಕುರಿತು ಎನ್‌ಸಿಪಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕಾಂಗ್ರೆಸ್ ಹೇಳಿದೆ.
"ಇವುಗಳು ನೀತಿಗೆ ಸಂಬಂಧಿಸಿದ ವಿಚಾರ. ಮೊದಲು ಅವರು ಈ ಕುರಿತು ನಿರ್ಧರಿಸಬೇಕು. ಬಳಿಕ ಕಾಂಗ್ರೆಸ್ ಈ ಕುರಿತು ಅವಲೋಕಿಸಬೇಕಾಗಿದೆ. ಈ ಕುರಿತು ಅಷ್ಟೊಂದು ಹಗುರವಾಗಿ ಪ್ರತಿಕ್ರಿಯಿಸಲಾಗದು" ಎಂಬುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೇಳಿದ್ದಾರೆ.
ಸೋನಿಯಾಗಾಂಧಿ ವಿದೇಶಿ ಮೂಲದ ಕುರಿತು ಸಂಗ್ಮಾ ಅವರು ದಶಕದ ಹಿಂದೆ ಮಾಡಿದ್ದ ಟೀಕೆಗೆ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನೊಂದಿಗ ಎನ್‌ಸಿಪಿ ವಿಲೀನಕ್ಕೆ ಕಾಂಗ್ರೆಸ್ ಒಪ್ಪುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ದ್ವಿವೇದಿ ಮೇಲಿನಂತೆ ಉತ್ತರಿಸಿದ್ದಾರೆ.
"ಹತ್ತು ವರ್ಷಗಳ ಹಿಂದೆ ಏನು ನಡೆಯಿತೋ ಅದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ. ಏನು ಸಂಭವಿಸಿತ್ತೋ ಅದಕ್ಕಾಗಿ ನಾನು ಕ್ಷಮೆಯಾಚಿಸಲು ಬಯಸಿದ್ದೆ" ಎಂದು ಮಾಜಿ ಸ್ಪೀಕರ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಸೋನಿಯಾ ಅವರನ್ನು ಭೇಟಿಯಾಗಿದ್ದ ವೇಳೆ ಸಂಗ್ಮಾ ಸೋನಿಯಾ ಕ್ಷಮೆಯಾಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಸೋನಿಯಾ ಅವರ ವಿದೇಶಿ ಮೂಲವನ್ನು ಪ್ರತಿಭಟಿಸಿ ಸಂಗ್ಮಾ, ಶರದ್ ಪವಾರ್, ತಾರಿಕ್ ಅನ್ವರ್ ಅವರುಗಳು ಪಕ್ಷ ತೊರೆದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು.
"ಸೋನಿಯಾ ಒಬ್ಬರು ಘನತೆಯ ವ್ಯಕ್ತಿ. ಆದದ್ದು ಆಗಿ ಹೋಯಿತು. ಮರೆತು ಬಿಡಿ" ಎಂಬುದಾಗಿ ಹೇಳಿರುವ ಸಂಗ್ಮಾ ಸೋನಿಯಾ ವಿದೇಶಿ ಮೂಲವು ಮುಗಿದ ವಿವಾದ ಎಂದು ಹೇಳಿದ್ದಾರೆ. |