ಮುಂಬೈಯಲ್ಲಿ ಉಗ್ರರ ದಾಳಿ ನಡೆದು ಆರು ತಿಂಗಳು ಕಳೆದ ಬಳಿಕ ಇದೀಗ ಮುಂಬೈ ಪೊಲೀಸರಿಗೆ ಒದಗಿಸಲಾದ ಬುಲೆಟ್‌ಪ್ರೂಫ್ ಜಾಕೀಟುಗಳ ಗುಣಮಟ್ಟದ ಕುರಿತು ವಿವಾದ ಉದ್ಭವಿಸಿದೆ. ಇದರಿಂದಾಗಿ ಉತ್ತಮ ಜಾಕೀಟು ಒದಗಿಸಿರುತ್ತಿದ್ದರೆ, ಹೇಮಂತ್ ಕರ್ಕರೆ ಸೇರಿದಂತೆ ಪೊಲೀಸ್ ಇಲಾಖೆಯ ಧೀರ ಅಧಿಕಾರಿಗಳನ್ನು ಕಳೆದುಕೊಳ್ಳುವ ಪ್ರಮೇಯ ಉಂಟಾಗುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಮಧ್ಯೆ, ಮಾಹಿತಿ ಹಕ್ಕಿನ ಆಧಾರದಲ್ಲಿ ಈ ಜಾಕೀಟುಗಳ ಖರೀದಿ ಕುರಿತು ಕೋರಲಾದ ಮಾಹಿತಿಗೆ ಮುಂಬೈಪೊಲೀಸರು ಆಘಾತಕಾರಿ ಉತ್ತರ ನೀಡಿದ್ದಾರೆ. ಈ ಕುರಿತ ಕಡತ ಕಾಣೆಯಾಗಿರುವ ಕಾರಣ ಮಾಹಿತಿ ನೀಡಲಾಗುವುದಿಲ್ಲ ಎಂಬ ಉತ್ತರ ನೀಡಲಾಗಿದೆ.
ಬುಲೆಟ್‌ಪ್ರೂಫ್ ಜಾಕೀಟು ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಳಪೆ ಜಾಕೀಟುಗಳ ಪ್ರದರ್ಶನ ನಡೆಸಿದ್ದರು. ಆಡಳಿತ ಪಕ್ಷಗಳ ಮೇಲೆ ತೀವ್ರಹರಿಹಾಯ್ದಿರುವ ವಿರೋಧ ಪಕ್ಷಗಳು ಈ ಕುರಿತು ತನಿಖೆಗೆ ಒತ್ತಾಯಿಸಿವೆ.
"ಬುಲೆಟ್‌ಪ್ರೂಫ್ ಜಾಕೀಟುಗಳ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿರುವಂತೆ ತೋರುತ್ತದೆ. ಈ ಜಾಕೀಟುಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ" ಎಂಬುದಾಗಿ ವಿಪಕ್ಷ ನಾಯಕ ರಾಮದಾಸ್ ಕದಮ್ ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಮುಖ್ಯಮಂತ್ರಿ ಅಶೋಕ ಚೌವಾಣ್ ಅಲ್ಲಗಳೆದಿದ್ದಾರೆ. "ವಿರೋಧ ಪಕ್ಷಗಳು ಆರೋಪಿಸಿರುವಂತೆ ಖರೀದಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ತಾನು ಬಲವಾಗಿ ಅಲ್ಲಗಳೆಯುತ್ತೇನೆ" ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.
"ಖರೀದಿ ಕಡತ ಕಾಣೆಯಾಗಿಲ್ಲ. ಆದರೆ ಅದರಲ್ಲಿರುವ ವಿವಾದಾಸ್ಪದ ಮಾಹಿತಗಳು ಹೊರಬೀಳುವುದನ್ನು ತಡೆಯಲು ಅದನ್ನು ಸಾರ್ವಜನಿಕ ವೀಕ್ಷಣೆಯಿಂದ ತಡೆಯಲಾಗಿದೆ" ಎಂಬುದಾಗಿ ಮುಂಬೈಪೊಲೀಸ್ ಇಲಾಖೆಯೊಳಗಿನ ಮೂಲಗಳು ಹೇಳಿವೆ ಎಂಬುದಾಗಿ ಸಿಎನ್ಎನ್-ಐಬಿಎನ್ ವರದಿ ಹೇಳಿದೆ.
"2004ರಲ್ಲಿ ಖರೀದಿಸಲಾಗಿರುವ ಜಾಕೀಟುಗಳ ಮಾದರಿಯ ಮೇಲೆ ರಾಜ್ಯಮೀಸಲು ಪೊಲೀಸ್ ಪಡೆಯ ವಲಯದಲ್ಲಿ ಪರಿಕ್ಷಾರ್ಥ ಗುಂಡು ಹಾರಿಸಲಾಗಿದೆ. ಕೃತಕ ದೇಹಗಳಿಗೆ ತೊಡಿಸಿದ ಈ ಜಾಕೀಟುಗಳ ಮೇಲೆ ಸ್ವಯಂ ಲೋಡ್ ಆಗುವ ರೈಫಲ್‌ಗಳು ಮತ್ತು ಎಕೆ-47ಗಳಿಂದ ಗುಂಡು ಹಾರಿಸಿದ್ದು, ಎಲ್ಲಾ ಗುಂಡುಗಳು ಜಾಕೀಟನ್ನು ತೂರಿ ಹೋಗಿವೆ. ದೂರದಿಂದ ಹಾರಿಸದ ಗುಂಡುಗಳು ಸಹ ಜಾಕೀಟನ್ನು ಹೊಕ್ಕು ಒಳಸೇರಿದೆ" ಎಂಬ ಆಘಾತಕಾರಿ ಅಂಶವನ್ನೂ ವರದಿ ತಿಳಿಸಿದೆ.
ಈ ಜಾಕೀಟುಗಳಿಗೆ ಅತ್ಯಂತ ಕಳಪೆ ಗುಣಮಟ್ಟದ ಬಟ್ಟೆಗಳು, ವೈರ್ ಮೇಶ್ ಹಾಗೂ ತುಕ್ಕುಹಿಡಿದ ಉಕ್ಕಿನ ಪ್ಲೇಟುಗಳನ್ನು ಬಳಸಲಾಗಿದೆ ಎಂದು ಮೂಲಗಳು ಹೇಳಿವೆ.
ಅಮೆರಿಕ, ಬ್ರಿಟನ್‌ಗಳಲ್ಲಿ ಬಳಸಲಾಗುವ ಬುಲೆಟ್‌ಪ್ರೂಫ್ ಜಾಕೀಟುಗಳು ಟೈಪ್3ಯದ್ದಾಗಿದ್ದು, ಇದು ಕಾರ್ಬೈನ್ ದಾಳಿ ಹಾಗೂ ಗ್ರೆನೇಡು ಸಿಡಿಗುಂಡುಗಳನ್ನು ತಡೆಬಲ್ಲಂತಹ ಉತ್ಕೃಷ್ಟ ಗುಣಮಟ್ಟದ್ದಾಗಿದೆ.
26/11ರಂದು ಬಳಸಾಗಿರುವ ಜಾಕೀಟುಗಳು ಗ್ಯಾಂಗ್‌ಸ್ಚರ್‌ಗಳ ಗುಂಡಿನ ಚಕಮಕಿಯ ವೇಳೆ ಬಳಸುವಂತಹದು ಎಂದು ಹೇಳಲಾಗಿದೆ. ಇಂತಹ ದಾಳಿಗಳು ನಡೆಯಬಹುದು ಮತ್ತು ಈ ಹಗರಣ ಬೆಳಕಿಗೆ ಬರಲಾರದು ಎಂಬುದಾಗಿ ಯಾರೂ ಊಹಿಸದ ಕಾರಣ ಇಂತಹ ಕಳಪೆ ಜಾಕೀಟುಗಳನ್ನು ಖರೀದಿ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ. ಜಾಕೀಟು ಖರೀದಿಯ ಟೆಂಡರ್ ಸ್ಥಳೀಯ ವ್ಯಾಪಾರಿಯೊಬ್ಬನಿಗೇ ಲಭಿಸಿದ್ದು ಆತ ಕಳಪೆ ಮಟ್ಟದ ಜಾಕೀಟು ಪೂರೈಸಿದ್ದಾನೆ ಎಂದೂ ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ವಿರೋಧ ಪಕ್ಷಗಳು ಈ ವಿವಾದದ ಮೂಲಕ ಆಡಳಿತ ಪಕ್ಷದ ತಲೆಗೆ ಬಿಸಿನೀರು ಕಾಯಿಸಲು ಯತ್ನಿಸುತ್ತಿವೆ.
ಕರ್ಕರೆ ಸಹೋದರನಿಗೆ ಮನವರಿಕೆ ಈ ಮಧ್ಯೆ, ಹೇಮಂತ್ ಕರ್ಕರೆ ಉಗ್ರರ ಗುಂಡಿಗೆ ಈಡಾಗಿ ಸಾಯುವ ವೇಳೆಗೆ ಧರಿಸಿದ್ದ ಬುಲೆಟ್‌ಪ್ರೂಫ್ ಜಾಕೀಟು ಕಳಪೆ ಮಟ್ಟದ್ದಾಗಿತ್ತು ಎಂಬುದಾಗಿ ತನಗೆ ಮನವರಿಕೆಯಾಗಿರುವುದಾಗಿ ಕರ್ಕರೆ ಶಿರಿಶ್ ಕರ್ಕರೆ ಹೇಳಿದ್ದಾರೆ. ಹೇಮಂತ್ ಕರ್ಕರೆ ಧರಿಸಿದ್ದ ಜಾಕೀಟಿನಲ್ಲಿದ್ದ ರಕ್ತದ ಕಲೆಗಳು, ಅದರಲ್ಲಿ ಗುಂಡು ಹಾಯ್ದಿರುವುದನ್ನು ತೋರಿಸುತ್ತಿತ್ತು ಎಂದು ಅವರು ಹೇಳಿದ್ದಾರೆ.
ರಾಮ್ ಪ್ರಧಾನ್ ಸಮಿತಿ ವರದಿ ಮುಂಬೈ ದಾಳಿ ವೇಳೆಗೆ ಮುಂಬೈ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ನೇಮಿಸಿರುವ ರಾಮ್‌ಪ್ರಧಾನ್ ಸಮಿತಿಯು, ನಗರ ಪೊಲೀಸರ ನಿರ್ಲಕ್ಷ್ಯ ಹಾಗೂ ಸಂಘಟನೆಯ ಕೊರತೆಯನ್ನು ತರಾಟೆಗೆ ತೆಗೆದುಕೊಂಡಿದೆ.
ಕೆಲವು ಅಧಿಕಾರಿಗಳು ಅಸಾಮಾನ್ಯ ಶೌರ್ಯ ಪ್ರದರ್ಶಿಸಿದ್ದಾರೆ. ಆದರೆ ಒಟ್ಟಾರೆಯಾಗಿ ಪೊಲೀಸರ ಕಾರ್ಯವು, ಅಸಂಘಟಿತವಾಗಿತ್ತು ಮತ್ತು ಸಾಕಷ್ಟು ವೃತ್ತಿಪರತೆಯನ್ನು ತೋರಲಿಲ್ಲ ಹಾಗೂ ಸಾಕಷ್ಟು ಅಚಾತುರ್ಯಗಳು ನಡೆದಿವೆ ಎಂದು ವರದಿ ಹೇಳಿದೆ. ವರದಿಯನ್ನು ಮುಂದಿನವಾರ ಸರ್ಕಾರಕ್ಕೆ ಸಲ್ಲಿಸಲಾಗುವುದು. |