ಚುನಾವಣೆಯಲ್ಲಿ ಸೋಲಿನ ನಂತರ ಮೆತ್ತಗಾಗಿರುವಂತೆ ತೋರುತ್ತಿರುವ ಬಿಜೆಪಿಯು ಸರ್ಕಾರದೊಂದಿಗೆ ರಾಜೀ ಸೂತ್ರಕ್ಕೆ ಮುಂದಾದಂತೆ ಕಂಡುಬಂದರೆ, ಯುಪಿಎ ಮಾತ್ರ ದ್ವೇಷಭಾಷಣ ಹಾಗೂ ಕೋಮುವಾದಿಂದಾಗಿ ಬಿಜೆಪಿಯು ಜನರಿಂದ ತಿರಸ್ಕೃತವಾಗಿದೆ ಎಂದು ದೂರಿತು.
ಜನತೆಯು ಸ್ಥಿರತೆಗಾಗಿ ಯುಪಿಎಗೆ ಮತನೀಡಿದ್ದಾರೆ ಮತ್ತು ಸರ್ಕಾರ ಹಾಗೂ ವಿರೋಧ ಪಕ್ಷಗಳ ಸಂಬಂಧದಿಂದ 'ಹೊಸ ಆರಂಭ'ವನ್ನು ಮಾಡಬೇಕು ಎಂದು ವಿಪಕ್ಷ ನಾಯಕ ಎಲ್.ಕೆ. ಆಡ್ವಾಣಿ ನುಡಿದರು.
ರಾಷ್ಟ್ರಪತಿಗಳ ವಂದನಾ ನಿರ್ಣಯ ಕುರಿತ ಚರ್ಚೆಯ ವೇಳೆಗೆ ಮಾತನಾಡಿದ ಆಡ್ವಾಣಿ ಅವರು ಯುಪಿಎ ಸರ್ಕಾರದ ಕಾರ್ಯಕ್ರಮಗಳನ್ನು ಹೊಗಳಿದರು. ಭದ್ರತೆ, ವಿಶೇಷ ಗುರುತಿನ ಚೀಟಿ, ಸಾಕ್ಷರತಾ ಕಾರ್ಯ, ಮಹಿಳಾ ಮೀಸಲಾತಿ ಮಸೂದೆ ಹಾಗೂ ವಿದೇಶಿ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಹಣವನ್ನು ಮತ್ತೆ ಭಾರತಕ್ಕೆ ತರುವ ಪ್ರಯತ್ನ- ಈ ಎಲ್ಲ ಕಾರ್ಯಗಳ ಕುರಿತು ಆಡ್ವಾಣಿ ಮೆಚ್ಚುಗೆ ಸೂಚಿಸಿದರು.
ರಾಷ್ಟ್ರೀಯ ಹಿತಾಸಕ್ತಿ ಹಾಗೂ ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವಿಪಕ್ಷವು ಸಹಕಾರ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಆದರೆ ವಂದನಾ ನಿರ್ಣಯದ ಮೇಲಿನ ಚರ್ಚೆ ಆರಂಭಿಸಿದ ಕಾಂಗ್ರೆಸ್ ಸಂಸದೆ ಗಿರಿಜಾ ವ್ಯಾಸ್ ಮಾತ್ರ ಬಿಜೆಪಿಯ ನೀತಿಸಿದ್ಧಾಂತಗಳಿಗೆ ಜನತೆ ಬಲವಾದ ಸಂದೇಶ ನೀಡಿದ್ದಾರೆ ಎಂದು ಟೀಕಿಸಿದರು. |